ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಆಕ್ರೋಶ
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಹಿಂದೂಗಳ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ನೂರಾರು ಹಿಂದೂ ಜಾಗರಣ ವೇದಿಕೆ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಬಿಜೆಪಿ, ಎಬಿವಿಪಿ, ಆರ್ಎಸ್ಎಸ್ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ರಾಘವೇಂದ್ರ ಅಚ್ರೇಕರ್ ಮೇಲೆ ಹೂಡಿರುವ ಗೂಂಡಾ ಕಾಯ್ದೆ ವಿರುದ್ಧ ಹಾಗೂ ಹಿಂದೂ ದೇವಾಲಯಗಳಲ್ಲಿ ಧ್ವನಿವರ್ಧಕ ವಶಪಡಿಸಿಕೊಂಡಿರುವುದನ್ನು ಖಂಡಿಸಿ ಬುಧವಾರ ನಗರದ ಟೌನ್ ಹಾಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಟೌನ್ಹಾಲ್ ವೃತ್ತದಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎಎಸ್ಪಿ ಲಕ್ಷ್ಮಣ್ ಹಾಗೂ ಸಿಪಿಐ ರಾಘವೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಟೌನ್ಹಾಲ್ ವೃತ್ತದಲ್ಲಿ ತಲೆ ಇಲ್ಲದ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಟೌನ್ ಹಾಲ್ ವೃತ್ತದಿಂದ ಬಿ.ಎಚ್. ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿ, ಧರಣಿ ನಡೆಸಿದರು.
ಎಎಸ್ಪಿ ಅಮಾನತ್ತಿಗೆ ಒತ್ತಾಯ: ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಶಾಂತವಾಗಿರುವ ತುಮಕೂರು ನಗರದಲ್ಲಿ ಕೋಮು ಗಲಭೆಗೆ ಕಾರಣರಾಗುತ್ತಿರುವ ಎಎಸ್ಪಿ ಲಕ್ಷ್ಮಣ್ ಮತ್ತು ಸಿಪಿಐ ರಾಘವೇಂದ್ರ ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ರಾಘವೇಂದ್ರ ಅಚ್ರೇಕರ್ ಮೇಲೆ ಹೂಡಿರುವ ಮತೀಯ ಗುಂಡಾ ಕಾಯ್ದೆಯನ್ನು ಬೇಷರತ್ ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಇಲ್ಲಿಯ ಕುವೆಂಪು ನಗರದಲ್ಲಿ ಹಿಂದೂ ದೇವಾಲಯದಲ್ಲಿ ಪ್ರಾರ್ಥನೆಗಾಗಿ ಹಾಕಿದ್ದ ಮೈಕ್ಸೆಟ್ ವಶಪಡಿಸಿಕೊಂಡು ದಂಡ ವಿಧಿಸುವ ಮೂಲಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ನಿರಂತರ ದಾಳಿ: ಪ್ರತಿಭಟನೆಯಲ್ಲಿ ಮತನಾಡಿದ ಹಿಂದೂ ಜಾಗರಣ ವೇದಿಕೆಯ ದೋ. ಕೇಶವಮೂರ್ತಿ ಹಿಂದೂಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಹಿಂದೂಗಳು ನೀಡುವ ತೆರಿಗೆ ಹಣದಲ್ಲಿ ಸಂಬಳ ಸಾರಿಗೆ ನೀಡಲಾಗುತ್ತಿದೆ. ಹಿಂದೂಗಳ ಮೇಲೆಯೇ ಈರೀತಿ ದೌರ್ಜನ್ಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಕೂಡಲೇ ರಾಘವೇಂದ್ರ ಅಚ್ರೇಕರ್ ಮೇಲಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು, ಈ ಹಿಂದಿನಂತೆ ದೇವಾಲಯಗಳಲ್ಲಿ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಲು ಅನುವು ಮಾಡಬೇಕು. ಇಲ್ಲದಿದ್ದರೆ ಮಸೀದಿಗಳಲ್ಲೂ ಧ್ವನಿವರ್ಧಕ ಬಳಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಯೋಜಿತ ಆಕ್ರಮಣ: ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕುವಾರು ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಜಿ.ಎಸ್. ಬಸವರಾಜ್ ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ರಾಜ್ಯದಲ್ಲಿ ಹಿಂದೂ ಸಮಾಜದ ಮೇಲೆ ಯೋಜಿತ ಆಕ್ರಮಣಗಳು ನಡೆಯುತ್ತಿದ್ದು, ಇದರ ಭಾಗವೇ ಅಜೆಕಾರ್ ಆರ್ಎಸ್ಎಸ್ ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಎಂಬ ಕಾರಣಕ್ಕೆ ಗೂಂಡಾ ಕಾಯ್ದೆ ದಾಖಲಿಸಿ ಚಳವಳಿ ಹತ್ತಿಕ್ಕುವ ಷಡ್ಯಂತ್ರ ನಡೆದಿದೆ ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ. ಸುರೇಶ್ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಎ.ಎಚ್. ಶಿವಯೋಗಿಸ್ವಾವು, ಮಾಜಿ ಶಾಸಕ ಬಿ.ಸಿ.ನಾಗೇಶ್ ಮೊದಲಾದವರು ಸರ್ಕಾರದ ಧೋರಣೆ ಖಂಡಿಸಿ ಮಾತನಾಡಿ ಈ ಘಟನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶ್ರೀ ಬಸವ ಮಹಾಲಿಂಗಸ್ವಾಮೀಜಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಜಿಲ್ಲಾ ಕಾರ್ಯದರ್ಶಿ ಸ್ನೇಕ್ ನಂದೀಶ್, ನಗರಾಧ್ಯಕ್ಷ ಕೆ.ಪಿ. ಮಹೇಶ್, ಜಿಲ್ಲಾ ಬಿಜೆಪಿ ಅಲ್ಪ ಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಶಬ್ಬೀರ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಹೆಗ್ಗಡೆ, ಉಪಾಧ್ಯಕ್ಷೆ ವಿಜಯಭಾಸ್ಕರ್, ಕಾರ್ಯದರ್ಶಿ ಟಿ.ಸಿ. ಪ್ರೇಮಲತಾ, ಯಶೋಧಮ್ಮ, ಗೀತಾ ಶಿವಣ್ಣ, ಸತೀಶ್, ಮಂಜಣ್ಣ, ಪಂಚಾಕ್ಷರಿ, ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಸಿ. ಉಮೇಶ್, ಮಂಜುನಾಥ್, ನಗರಸಭಾ ಸದಸ್ಯ ಕರುಣಾರಾಧ್ಯ, ವಿಶ್ವನಾಥ್, ನಾಗಣ್ಣ, ರುದ್ರೇಶ್ ಮೊದಲಾದವರು ಹಾಜರಿದ್ದರು.