ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ಶಿರಾ ತಾಲೂಕು ಬೇಡ
ಶಿರಾ: ಈಗ ಹೊಸದಾಗಿ ರಚಿತವಾಗಿರುವ ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ (ಎ.ಆರ್.ಟಿ.ಓ.) ಶಿರಾ ತಾಲೂಕನ್ನು ಒಳಪಡಿಸಬಾರದೆಂದು ನಗರದ ಹಲವು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿರಾ ತಹಸೀಲ್ದಾರ್ ಮುಖಾಂತರ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕಿನ ವಿವಿಧ ಸಂಘಟನೆಗಳಾದ ಶಿರಾ ತಾಲೂಕು ಆಟೋ ಚಾಲಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಭಗತ್ ಕ್ರಾಂತಿ ಸೇನೆ. ಟ್ಯಾಕ್ಸಿ ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಹಿರಿಯ ನಾಗರಿಕರ ವೇದಿಕೆ, ಮುಖಂಡರುಗಳು ಮಾತನಾಡಿ, ಸದ್ಯ ತುಮಕೂರು ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಶಿರಾ ತಾಲೂಕು ಒಳಪಟ್ಟಿದ್ದು, ಈಗ ಹೊಸದಾಗಿ ರಚಿತವಾಗಿರುವ ಮಧುಗಿರಿ ಎ.ಆರ್.ಟಿ.ಓ. ವ್ಯಾಪ್ತಿಗೆ ಶಿರಾ ತಾಲೂಕನ್ನು ಒಳಪಡಿಸಲು ಅಧಿಕಾರಿಗಳು ಚರ್ಚಿಸುತ್ತಿದ್ದು, ನಮಗೆ ತುಮಕೂರು ಜಿಲ್ಲಾ ಕೇಂದ್ರವು ಮಧುಗಿರಿಯಷ್ಟೇ ದೂರವಿರುವುದರಿಂದ ತುಮಕೂರು ಜಿಲ್ಲಾ ಕೇಂದ್ರವೂ ಆಗಿರುವುದರಿಂದ ಎಲ್ಲಾ ಕೆಲಸ ಕಾರ್ಯಗಳು ತುಮಕೂರಿಗೆ ಸೀಮಿತವಾಗಿರುವುದರಿಂದ ಶಿರಾ ತಾಲೂಕನ್ನು ತುಮಕೂರು ಸಾರಿಗೆ ಪ್ರಾಧಿಕಾರಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಹಾಗೊಂದು ವೇಳೆ ಇದಕ್ಕೆ ವಿರುದ್ಧವಾಗಿ ಶಿರಾ ತಾಲೂಕನ್ನು ಮಧುಗಿರಿ ಎ.ಆರ್.ಟಿ.ಓ. ಕಚೇರಿಗೆ ಒಳಪಡಿಸಿದರೆ ತಾಲೂಕಿನ ಎಲ್ಲಾ ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ಮಾಡುವುದಲ್ಲದೆ. ಶಿರಾ ಬಂದ್ ನಂತಹ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ವರ್, ಕರವೇ ಅಧ್ಯಕ್ಷ ನಾಗರಾಜ್, ಜಯಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ವಿಜಯ್‌ಕುಮಾರ್, ಮತ್ತಿತರರು ಮಾತನಾಡಿದರು. ಜಯಕರ್ನಾಟಕ ವೇದಿಕೆ ಅಧ್ಯಕ್ಷ ಉಮೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಹುಲಿಕುಂಟೆ ರಘು, ನಗರ ಅಧ್ಯಕ್ಷ ಸುರೇಶ್, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಅತಾವುಲ್ಲಾ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.
ಪತ್ರಿಕಾಗೋಷ್ಠಿಯ ನಂತರ ಸಂಘಟನೆಗಳು ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತ ಕಾಲ್ನಡಿಗೆಯಲ್ಲಿ ತೆರಳಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.