ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶೇ. 95 ರಷ್ಟು ಸಾಲ ವಸೂಲಾತಿ: ಕೆಎನ್‌ಆರ್

Mainashree
Updated On : 1 Jan 2014, 11:15 am

ತುಮಕೂರು: ಯಾವುದೇ ರೀತಿಯ ಕಾನೂನಿನಡಿ ನೋಂದಣಿಯಾಗದೇ ಸಂಘಟನೆಯಾಗಿರುವ ಗುಂಪುಗಳಿಂದ ಶೇ. 95 ರಷ್ಚು ಸಾಲ ವಸೂಲಾತಿಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಶಾಸಕರೂ ಆಗಿರುವ ಕೆ.ಎನ್. ರಾಜಣ್ಣ ತಿಳಿಸಿದರು.
ಅವರು ತುಮಕೂರಿನ ಡಿಸಿಸಿ ಬ್ಯಾಂಕ್ ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1-4-2013 ರಿಂದ 30-11-2013 ರ ಅಂತ್ಯಕ್ಕೆ ತುಮಕೂರು ಜಿಲ್ಲೆಯಲ್ಲಿನ ಸ್ವ ಸಹಾಯ ಗುಂಪುಗಳಿಗೆ 5523.40ಲಕ್ಷ ರು. ಸಾಲ ಸೌಲಭ್ಯ ನೀಡುವುದರ ಮೂಲಕ ಅವರನ್ನು ಬಡತನ ರೇಖೆಯಿಂದ ಮೇಲೆತ್ತುವ ಪ್ರಯತ್ನ ಮಾಡಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಜಂಟಿ ಬಾಧ್ಯತಾ 587 ಗುಂಪುಗಳನ್ನು ರಚಿಸಲಾಗಿದ್ದು, ಈ ಪೈಕಿ 221 ಗುಂಪುಗಳಿಗೆ 201.75 ಲಕ್ಷ ರು ಸಾಲ ವಿತರಿಸಲಾಗಿದೆ. ಕೃಷಿ ಸಾಲದ ಜತೆಗೆ ವಿವಿಧ ಕೃಷಿಯೇತರ ಸಾಲಗಳಾದ ಚಿನ್ನಾಭರಣ ಸಾಲ, ಗೃಹ ನಿರ್ಮಾಣ ಸಾಲ, ಸ್ಥಿರಾಸ್ಥಿ ಸಾಲ, ಮೀರಳೆತ ಸಾಲ, ವೇತನಾಧಾರಿತ ಸಾಲ, ವಾಹನ ಸಾಲ, ವ್ಯಾಪಾರಾಭಿವೃದ್ಧಿ ಸಾಲ, ರೈತರ ದಾಸ್ತಾನು, ಅಡಮಾನ ಸಾಲ ಇಂತಹ ಸಾಲಗಳಿಗೆ 30-11-2013 ರ ಅಂತ್ಯಕ್ಕೆ 23,478.66  ಲಕ್ಷ ರು.ಗಳ ಸಾಲ ನೀಡಲಾಗಿದೆ. ಇದುವರೆಗೂ ಜಿಲ್ಲೆಯ 69,526 ರೈತರಿಗೆ ಕೆಸಿಸಿ ಕಾರ್ಡ್‌ಗಳ ಮೂಲಕ ಸಾಲವನ್ನು ವಿತರಿಸಲಾಗಿದೆ. ವಿಶೇಷವಾಗಿ ಅತಿ ಸಣ್ಣ, ಹರಿಜನ-ಗಿರಿಜನ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸಾಲ ನೀಡುವಲ್ಲಿ ಆದ್ಯತೆ ನೀಡಲಾಗಿದೆ. ಇದರ ಜತೆಯಲ್ಲಿ 11,327 ಸ್ವ ಸಹಾಯ ಗುಂಪುಗಳನ್ನು ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಚಿಸಲಾಗಿದ್ದು, ಸುಮಾರು 9257 ಹೊಸ ಗುಂಪುಗಳಿಗೆ 5523.40 ಲಕ್ಷ ರು. ಹಾಗೂ ಪುನರಾವರ್ತನೆ ಸಾಲ 15,129 ಗುಂಪುಗಳಿಗೆ  29.061.78 ಲಕ್ಷ ಸಾಲ ವಿತರಣೆ ಮಾಡಲಾಗಿದೆ. 30-11-2013 ರ ಅಂತ್ಯಕ್ಕೆ 9158.68 ಲಕ್ಷ ರು. ಬಾಕಿಯಿರುತ್ತದೆ ಎಂದು ಮಾಹಿತಿ ನೀಡಿದರು.
ವಿರ್ದ್ಯಾರ್ಥಿ ವೇತನ: ಆಮ್ ಆದ್ಮಿ ಬಿಮಾ ಉಚಿತ ವಿಮಾ ಯೋಜನೆಯಡಿಯಲ್ಲಿ 9 ರಿಂದ 12 ನೇ ತರಗತಿಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿರುವ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ವಾರ್ಷಿಕ 1200, ರು. ವಿದ್ಯಾರ್ಥಿ ವೇತನವನ್ನು ಎಲ್‌ಐಸಿ ನೀಡುತ್ತದೆ. ಹಾಲಿ ತುಮಕುರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಒಟ್ಟು 9257 ಸ್ವ ಸಹಾಯ ಗುಂಪುಗಳಿದ್ದು, ಸುಮಾರು 1,11,084 ಸದಸ್ಯರನ್ನು ಒಳಗೊಂಡಿದೆ. ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ಈಗಾಗಲೇ ಸುಮಾರು 598 ಗುಂಪುಗಳಿಂದ 8848 ಸದಸ್ಯರನ್ನು ವಿಮೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಬಾರ್ಡ್ ಅತ್ಯುತ್ತಮ ಪ್ರಶಸ್ತಿ: 2010-11 ಹಾಗೂ 2011-12 ನೇ ಸಾಲುಗಳಲ್ಲಿ, ನಬಾರ್ಡ್‌ನ ವತಿಯಿಂದ ಅತ್ಯುತ್ತಮ ಪ್ರಶಸ್ತಿಯನ್ನು ಗಳಿಸಿರುವುದೂ ಹೆಮ್ಮೆಯ ವಿಷಯವಾಗಿದೆ. ಅಪೆಕ್ಸ್ ಬ್ಯಾಂಕಿನ ವತಿಯಿಂದ 2011-12 ನೇ ಸಾಲಿನಲ್ಲಿ ಆಡಿಟ್ ವರ್ಗೀಕರಣದ ಬ್ಯಾಂಕ್‌ಗಳಲ್ಲಿ ಎರಡನೆ ಸ್ಥಾನದಲ್ಲಿತ್ತು. 2013 ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಹಿಂದಿನ ವರ್ಷದಂತೆಯೇ ಪ್ರಸಕ್ತ 2012-13 ನೇ ಸಾಲಿನಲ್ಲಿಯೂ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿನ ರೈತ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು, ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗಿದೆ.
ಅಲೆಮಾರಿಗಳಿಗೆ ಸಾಲ: ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲೂಕುಗಳಲ್ಲಿ ಅಲೆಮಾರಿ ಜನಾಂಗದ ಸದಸ್ಯರು ಇದುವರೆವಿಗೂ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡಲು ಅವಕಾಶವಿರಲಿಲ್ಲ. ಇಂತಹ ಅಲೆಮಾರಿ ಜನಾಂಗದ ಸದಸ್ಯರಿಗೆ ಸ್ವ ಸಹಾಯ ಗುಂಪುಗಳನ್ನು ರಚಿಸಿ, ಅವುಗಳ ಮೂಲಕ ಸುಮಾರು 1 ಕೋಟಿ ರು. ಸಾಲ ನೀಡಿದ್ದು, ಸದರಿ ಗುಂಪುಗಳು ಸುಸ್ತಿ ಇಲ್ಲದೇ ಮರುಪಾವತಿಸಿವೆ.
ಕಡಿಮೆ ಬಡ್ಡಿಗೆ ಚಿನ್ನದ ಸಾಲ: ಬ್ಯಾಂಕ್ ವತಿಯಿಂದ ಹೆಚ್ಚಿನ ಚಿನ್ನಾಭರಣ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಹಾಗೂ  ತ್ವರಿತವಾಗಿ ಸಾಲ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿನ ಖಾಸಗಿ ಲೇವಾದೇವಿದಾರರು, ಗಿರವಿದಾರರುಗಳ ಶೋಷಣೆಯಿಂದ ಮುಕ್ತಿಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಲಾಗಿದೆ.
ಕೋರ್  ಬ್ಯಾಂಕಿಂಗ್: ಮೇಲಿನ ಸಾಧನೆಯ ಜತೆಗೆ ಬ್ಯಾಂಕ್ ಇಡೀ ರಾಜ್ಯದಲ್ಲೇ ಸಂಪೂರ್ಣ ಗಣಕೀಕರಣ ಅಂದರೆ ಕೋರ್  ಬ್ಯಾಂಕಿಂಗ್ ಸಲ್ಯೂಷನ್ಸ್ ಅಳವಡಿಸಿ, ಬ್ಯಾಂಕಿನ ಎಲ್ಲ 24 ಶಾಖೆಗಳನ್ನು ಕೋರ್  ಬ್ಯಾಂಕಿಂಗ್  ಸಲ್ಯೂಷನ್ಸ್ ಜಾಲದಲ್ಲಿ ಸೇರ್ಪಡೆಗೊಳಿಸಿದ್ದು, ಇಡೀ ರಾಜ್ಯದಲ್ಲೇ ಈ ರೀತಿಯ ವ್ಯವಸ್ಥೆ ಅಳವಡಿಸಿಕೊಂಡ ಪ್ರಥಮ ಡಿಸಿಸಿ ಬ್ಯಾಂಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ರಾಜಣ್ಣ ಹರ್ಷ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಆಮ್ ಆದ್ಮಿ ಬಿಮಾ ಉಚಿತ ವಿಮಾ ಸೌಲಭ್ಯ
ಆಮ್ ಆದ್ಮಿ ಭೀಮಾ ಉಚಿತ ವಿಮಾ ಸೌಲಭ್ಯ ಯೋಜನೆ ಭಾರತೀಯ ವಿಮಾ ನಿಗಮ ಹಾಗೂ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಸಹಯೋಗದೊಂದಿಗೆ ಗ್ರಾಮೀಣ ಭೂ ರಹಿತ ಕುಟುಂಬಗಳು ಹಾಗೂ ಮೇಲಿನ ಉಲ್ಲೇಖದ ಸರ್ಕಾರಿ ಆದೇಶದನ್ವಯ ಗುರುತಿಸಲಾದ ವಿವಿಧ 47 ವರ್ಗದ ಜನತೆ ಮತ್ತು ಕಸುಬುದಾರರು, ವಿಶೇಷವಾಗಿ ಸ್ವ ಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಮಹಿಳೆಯರು, ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ.
ಈ ವಿಮಾ ಯೋಜನೆಯ ವಾರ್ಷಿಕ ಕಂತು 200 ರು.ಗಳನ್ನು ಭಾರತ ಸರ್ಕಾರ ಹಾಗೂ ತಲಾ 100 ರು.ಗಳನ್ನು ಕರ್ನಾಟಕ ಸರ್ಕಾರ ಭರಿಸುತ್ತದೆ. ಇದು ಸಂಪೂರ್ಣ ಉಚಿತ ವಿಮಾ ಪಾಲಿಸಿಯಾಗಿರುತ್ತದೆ. 18 ರಿಂದ 59 ವರ್ಷದೊಳಗಿನ ವ್ಯಕ್ತಿಗಳು ಈ ವಿಮೆಗೆ ಅರ್ಹರಾಗಿರುತ್ತಾರೆ. ಈ ವಿಮೆಗೆ ಒಳಪಟ್ಟ ಫಲಾನುಭವಿಗಳು ಸಹಜವಾಗಿ ಮರಣ ಹೊಂದಿದಲ್ಲಿ 30 ಸಾವಿರ ರು. ಅಪಘಾತದಲ್ಲಿ ಮರಣ ಹೊಂದಿದಲ್ಲಿ 75 ಸಾವಿರ ರು, ಅಪಘಾತದಲ್ಲಿ ಕಣ್ಣು ಅಥವಾ ಎರಡು ಕಾಲುಗಳನ್ನು ಕಳೆದುಕೊಂಡಲ್ಲಿ 75 ಸಾವಿರ ರು., ಒಂದು ಕಣ್ಣು  ಅಥವಾ ಒಂದು ಕಾಲು ಕಳೆದುಕೊಂಡಲ್ಲಿ 37,500 ರು. ಪರಿಹಾರ ಲಭಿಸುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement