ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೊಸ ವರ್ಷದ ಪಾರ್ಟಿ ಮುಗಿಸಿ ತೆರಳುತ್ತಿದ್ದಾಗ ಅಪಘಾತ: ಇಬ್ಬರ ಸಾವು

Mainashree
Updated On : 1 Jan 2014, 11:18 am

ಕನ್ನಡಪ್ರಭ ವಾರ್ತೆ, ತುಮಕೂರು, ಜ.1
ಹೊಸ ವರ್ಷದ ಪಾರ್ಟಿ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಬೆಂಗಳೂರಿನ ಇಬ್ಬರು ಸಾವನ್ನಪ್ಪಿದ ಘಟನೆ ರಾ.ಹೆದ್ದಾರಿ 4 ರ ಹಿರೇಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ಕಾಲ್ ಸೆಂಟರ್ ಒಂದರ ಮ್ಯಾನೇಜರ್ ರಾಜೇಶ್ (32) ಹಾಗೂ ಚಾಲಕ ವಿಜಯೇಂದ್ರ (30) ಸಾವನ್ನಪ್ಪಿದ ದುರ್ದೈವಿಗಳು.
ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ಕು ಮಂದಿ ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ತಿಪಟೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಧರಣೀಶ್ ಹಾಗೂ ಕಿರಣ್ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.

ಚಿಕ್ಕನಾಯಕನಹಳ್ಳಿ: ಹೊಸವರ್ಷಾಚರಣೆಯಲ್ಲಿ ಭಾಗವಹಿಸಿ ವಾಪಸ್ ಹಿಂತಿರುಗುವಾಗ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಇತರ ನಾಲ್ವರಿಗೆ  ತೀವ್ರ ಗಾಯಗಳಾಗಿರುವ ಪ್ರಕರಣ ನಡೆದಿದೆ.
ಡಿ.31ರ ರಾತ್ರಿ ಮದನಿಂಗನ ಕಣಿವೆಕಡೆಯಿಂದ ರಾತ್ರಿ ವೇಳೆ ಹೊಸವರ್ಷಾಚರಣೆ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದ ಗೋಪಿ (33, ಕಿಬ್ಬನಹಳ್ಳಿಹಳೆಯೂರು), ಆದರ್ಶ ಜೆ.ಸಿ.ಪುರ (ವಿವಾಹಿತ), ನವೀನ್‌ಕುಮಾರ್(25, ತಿಪಟೂರು ತಾಲೂಕು ಈಚನೂರು), ಸಿದ್ದೇಶ್ (30, ಬಿ.ಪಾಳ್ಯ) ಹಾಗೂ ಷಡಕ್ಷರಿ (32, ಜಕ್ಕನಹಳ್ಳಿ)  ತಮ್ಮ ಸ್ನೇಹಿತರೊಂದಿಗೆ ಹೊಸವರ್ಷಾಚರಣೆ ಪಾರ್ಟಿಯಲ್ಲಿ ಭಾಗವಹಿಸಿ ವಾಪಸ್ ಬರುವಾಗ ಮದನಿಂಗನ ಕಣಿವೆಯ ಸಮೀಪದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಚಾಲನೆ ಮಾಡುತ್ತಿದ್ದ ಗೋಪಿ ಸ್ಥಳದಲ್ಲೇ ಮೃತಪಟ್ಟರು. ಉಳಿದ ನಾಲ್ವರಿಗೆ ಮಾರಣಾಂತಿಕ ಗಾಯಗಳಾಗಿವೆ. ಮೃತ ಗೋಪಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ. ಗಾಯಗೊಂಡ ನಾಲ್ವರನ್ನು ತುಮಕೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪಿಎಸ್‌ಐ ಎಸ್. ಮುನಿರಾಜು ತಿಳಿಸಿದ್ದಾರೆ.

ಮಲೇರಿಯಾಕ್ಕೆ ವ್ಯಕ್ತಿ ಬಲಿ
ಪಾವಗಡ: ಕಳೆದ 1 ವಾರದಿಂದ ಮಲೇರಿಯಾ ಜ್ವರಕ್ಕೆ ತುತ್ತಾಗಿ ಬಳಲುತ್ತಿದ್ದ ವಿವಾಹಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬುಧವಾರ ತಾ.ಸಿ.ಕೆ.ಪುರ ಗ್ರಾಮದಲ್ಲಿ ನಡೆದಿದೆ. ಮಲೇರಿಯಾ ಜ್ವರಕ್ಕೆ ತುತ್ತಾಗಿ ಮೃತಪಟ್ಟ ವ್ಯಕ್ತಿ ಕರಿಯಣ್ಣ (35)ಎಂಬುವವರು. ಸಿ.ಕೆ.ಪುರ ಗ್ರಾಮದ ಕರಿಯಣ್ಣ ಎಂಬುವರಿಗೆ ಸುಸ್ತಾಗಿ ವಿಪರೀತ ಜ್ವರ ಕಾಣಿಸಿಕೊಂಡ ಮೇರೆಗೆ ಪಾವಗಡ ಖಾಸಗಿ ಆಸ್ಪತ್ರೆಯೊಂದರಲ್ಲಿ ರಕ್ತ ಪರೀಕ್ಷೆ ಮಾಡಿಸಿ ಮಲೇರಿಯಾ ಜ್ವರಕ್ಕೆ ಸಂಬಂಧಪಟ್ಟ ಸೂಕ್ತ ಚಿಕಿತ್ಸೆ ಪಡೆದಿರುವುದಾಗಿ ತಿಳಿದಿದೆ. ವಿಪರೀತ ಜ್ವರದಿಂದ ಅವರು ಸಾವನ್ನಪ್ಪಿದರು ಎನ್ನಲಾಗಿದೆ.


ಯುವಕ ನೇಣಿಗೆ ಶರಣು
ಪಾವಗಡ: ಹುಣಿಸೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ತಾ.ಸಿ.ಕೆ.ಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವಕ ಪಾಂಡು (24). ಸಿ.ಕೆ.ಪುರ ಗ್ರಾಮದ ವಾಸಿ ಪಾಂಡು ಪಾವಗಡ ವಿಜಯಾ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕಳೆದ 2 ವರ್ಷಗಳಿಂದ ಸೇವೆ ಮಾಡುತ್ತಿದ್ದರು. ಬೆಳಿಗ್ಗೆ 6ಗಂಟೆ ಸಮಯದಲ್ಲಿ ಗ್ರಾಮದ ತಮ್ಮ ಮನೆಯಿಂದ ಹೊರವಲಯಕ್ಕೆ ಹೋದವನು ಮತ್ತೆ ಮನೆಗೆ ಬಂದಿಲ್ಲ. ಗ್ರಾಮದ ಹೊರವಲಯದಲ್ಲಿ ಹುಣಿಸೇ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕಂಡ ಗ್ರಾಮದ ಕೆಲವರು ಅವರ ಕುಟುಂಬಕ್ಕೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಆರಸೀಕೆರೆ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement