ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ನರೇಂದ್ರಬಾಬು
ತುಮಕೂರು: ಕೆಲ ಒಕ್ಕಲಿಗ ಮುಖಂಡರು ಜನಾಂಗದ ಸಂಘಟನೆಗೆ ಧಕ್ಕೆಯಾಗುವಂತಹ ಹೇಳಿಕೆ ನೀಡುತ್ತಾ ಮತದಾರರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ಬಂಧುಗಳು ಕಿವಿಗೊಡಬಾರದೆಂದು ನಿರ್ದೇಶಕ ಸ್ಥಾನದ ಅಭ್ಯರ್ಥಿ ನರೇಂದ್ರಬಾಬು ಮನವಿ ಮಾಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂತಹ ಹೇಳಿಕೆಗಳಿಗೆ ಕಿವಿಗೊಡದೆ ಜನಾಂಗದ ಸಂಘಟನೆಗೆ ಚ್ಯುತಿಬಾರದಂತೆ ಎಚ್ಚರ ವಹಿಸಬೇಕು ಎಂದು ವಿನಂತಿಸಿದರು.
ತಮ್ಮನ್ನು ಈ ಬಾರಿ ಒಕ್ಕಲಿಗ ಸಂಘದ ನಿರ್ದೇಶಕನನ್ನಾಗಿ ಆಯ್ಕೆ ಮಾಡಿದರೆ ಒಕ್ಕಲಿಗ ಸಮುದಾಯವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತೇನೆ. ಒಕ್ಕಲಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ಜನಾಂಗದ ಹಿರಿಯರು ಕಟ್ಟಿ ಬೆಳೆಸಿದ ಈ ಸಂಘದ ಆಶಯಗಳನ್ನು ಈಡೇರಿಸಿ ಅದರ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಭಯ ನೀಡಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡುವ ಜತೆಗೆ ಅಸಹಾಯಕರಿಗೆ ಕೈಲಾದಷ್ಟು ಸಹಾಯ ಮಾಡುತ್ತೇನೆ. ಎಲ್ಲಾ ಜಾತಿ ಜನಾಂಗದೊಂದಿಗೆ ಬೆರೆತು ಸಮಾಜಮುಖಿಯಾಗಿ ಕೆಲಸ ಮಾಡುತ್ತೇನೆ ಎಂದರು.
ನಿರ್ದೇಶಕನಾಗಿ ಆಯ್ಕೆಯಾದರೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಘದ ವತಿಯಿಂದ ವಿದ್ಯಾರ್ಥಿ ನಿಲಯ ಸ್ಥಾಪಿಸುವುದಾಗಿ ತಿಳಿಸಿದ ಅವರು ಕಡುಬಡವರಿಗೆ ಉಚಿತ ಶಿಕ್ಷಣ ದೊರಕಿಸುವಲ್ಲಿ ನೆರವಾಗುವ ಆಶಯ ಇಟ್ಟುಕೊಂಡಿರುವುದಾಗಿ ತಿಳಿಸಿದರು. ಒಕ್ಕಲಿಗರ ಸಂಘದ ಅಪಾರವಾದ ಆಸ್ತಿ ರಕ್ಷಣೆ ಹಾಗೂ ಅಭಿವೃದ್ಧಿಗೆ ಯೋಜನೆ ರೂಪಿಸುವುದು, ಒಕ್ಕಲಿಗರ ನ್ಯಾಯಯುತ ಹಕ್ಕಿಗಾಗಿ ಹೋರಾಟ ರೂಪಿಸಲು ಮುಂಚೂಣಿಯಲ್ಲಿರುವುದಾಗಿ ತಿಳಿಸಿದರು.
ಜಿಲ್ಲಾ ಕೇಂದ್ರ ಸಂಘದಿಂದ ತುಮಕೂರಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಪ್ರಯತ್ನ ಮಾಡುವುದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಕೈಗೆಟಕುವಂತೆ ಉನ್ನತ ಶಿಕ್ಷಣ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.