ಜೀವನ ಕಲೆ, ಸುದರ್ಶನ ಕ್ರಿಯೆ ತರಬೇತಿ ಸಮಾರೋಪ
ನೆಲಮಂಗಲ: ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ದಿನನಿತ್ಯದ ಕೆಲಸಗಳ ಒತ್ತಡದಲ್ಲಿ ಮನಶಾಂತಿಯನ್ನು ಬಯಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯೋಗ ಶಿಕ್ಷಕ ಶಂಕರ್ ತಿಳಿಸಿದರು.
ಅವರು ಗುರುವಾರ ತಾಲೂಕಿನ ಸೋಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಭವನದಲ್ಲಿ ಯೋಗ ಗುರು ರವಿಶಂಕರ್ ಗುರೂಜಿ ಆಶ್ರಮದ ವತಿಯಿಂದ ಆಯೋಜಿಸಿದ್ದ 6 ದಿನಗಳ ಕಾಲ ನಡೆದ ಜೀವನ ಕಲೆ ಮತ್ತು ಸುದರ್ಶನ ಕ್ರಿಯೆಯ ತರಬೇತಿ ಕಾರ್ಯಗಾರದ ಸಮಾರೋಪ ಸಭೆಯಲ್ಲಿ ಮಾತನಾಡುತ್ತಾ ಮನುಷ್ಯ ಹಣದ ಹಿಂದೆ ಬಿದ್ದರೆ ಅತೀ ಬೇಗ ಅನಾರೋಗ್ಯಕ್ಕೆ ತುತ್ತಾಗಿ ಸುಖ ಜೀವನದ ಆಸೆಯನ್ನು ದೂರ ಮಾಡಿಕೊಳ್ಳಬೇಕಾಗುತ್ತದೆ. ತನ್ನ ದೇಹ ಸುಖಕ್ಕಾಗಿ ಮತ್ತು ತಮ್ಮ ಸಂಸಾರದ ಶಾಂತಿ ನೆಮ್ಮದಿಗಾಗಿಯಾದರೂ ವ್ಯಾಯಾಮ, ಯೋಗ ಹಾಗೂ ಸುದರ್ಶನ ಕ್ರಿಯೆಯಂಥ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ತಾವು ನೆಮ್ಮದಿಯಿಂದ ಇದ್ದು ತಮ್ಮ ಕುಟುಂಬದವರನ್ನು ಶಾಂತಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಲು ಇಂಥಶಿಬಿರಗಳು ಸಹಾಯವಾಗುತ್ತವೆ ಎಂದರು. ರವಿಶಂಕರ್ ಗುರೂಜಿ ಅವರ ಸಂಕಲ್ಪದಂತೆ ತಾಲೂಕಿನ ಶಿವಗಂಗೆಯ ಬೆಟ್ಟದಲ್ಲಿ ಹುಟ್ಟುವ ಕುಮದ್ವತಿ ನದಿಯ ಜಲಾನಯನ ಪ್ರದೇಶದ ಜನರಲ್ಲಿ ಆರೋಗ್ಯದ ಅರಿವು ಮೂಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ವಿಷಯವಾಗಿ ರವಿಶಂಕರ್ ಗುರೂಜಿ ಅವರೆ ಇಲ್ಲಿ ವಿಶೇಷ ಶಿಬಿರ ಮತ್ತು ನದಿಯನ್ನು ಪುನಶ್ಚೇತನಗೊಳಿಸಲು ಕಾರ್ಯಕ್ರಮ ನಡೆಸಲಿದ್ದಾರೆ ಎಂದರು. 50ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿ ವಿಶೇಷ ಯೋಗ ಮತ್ತು ಸುದರ್ಶನ ಕ್ರಿಯೆಯ ಕಲೆಯನ್ನು ಕಲಿತುಕೊಂಡರು.