ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾವಗಡ ತಾಲೂಕಿಗೆ ಶೀಘ್ರ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ

Mainashree
Updated On : 2 Jan 2014, 10:27 am

ಬೆಂಗಳೂರು: ಪಾವಗಡ ತಾಲೂಕಿಗೆ ತಾತ್ಕಾಲಿಕವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಶಾಶ್ವತ ಯೋಜನೆ ಜಾರಿಗೊಳಿಸಲಾಗುವುದು ಎಂಬ ಸರ್ಕಾರದ ಭರವಸೆ ಆಧಾರದ ಮೇಲೆ ಹೈಕೋರ್ಟ್ ಶುದ್ಧ ನೀರು ಪೂರೈಕೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಫ್ಲೋರೈಡ್ ಭರಿತ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ, ತುಂಗಭದ್ರಾ ಜಲಾಶಯದಿಂದ ಪಾವಗಡ ತಾಲೂಕಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಕಾಲಾವಕಾಶ ಬೇಕು ಎಂಬ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರ ಹೇಳಿಕೆ ಆಧಾರದ ಮೇಲೆ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಅಲ್ಲದೆ, ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಿದೆ. ಪಾವಗಡದ ಮೂಲಕ ರಾಜ್ಯದಿಂದ ಆಂಧ್ರಪ್ರದೇಶದ ಮಡಕಸಿರ ಸೇರಿದಂತೆ ಇತರ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿದೆ. ಆದರೆ, ಪಾವಗಡದ ಜನರಿಗೆ ಮಾತ್ರ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರೀಯ ಕಿಸಾನ್ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಪ್ರಮಾಣಪತ್ರದಲ್ಲೇನಿದೆ?: ಪಾವಗಡ ತಾಲೂಕಿನ 62 ಹಳ್ಳಿಗಳಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಈಗಾಗಲೇ ಗುತ್ತಿಗೆ ನೀಡಲಾಗಿದೆ. ಈ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯವಿದ್ದರೂ, ಈ ನೀರಿನ ಮೂಲ ಕಲುಷಿತವಾಗಿರುವುದರಿಂದ  ಮುನ್ನೆಚ್ಚರಿಕೆ ಕ್ರಮ ಕೈಗೊಂಡ ನಂತರವಷ್ಟೇ ಅದನ್ನು ಜನರಿಗೆ ಒದಗಿಸಲು ಸರ್ಕಾರ ನಿರ್ಧರಿಸಿದೆ. ನಾಲ್ಕು ಗ್ರಾಮಗಳಲ್ಲಿ ನೀರಿನ ಮೂಲ ಸುರಕ್ಷಿತವಾಗಿಲ್ಲ. ಈ ಗ್ರಾಮಗಳಿಗೆ ನವೆಂಬರ್ ತಿಂಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಪ್ರದೇಶಗಳಿಗೆ ನಾಲ್ಕು ಟ್ಯಾಂಕರ್‌ಗಳು ಪ್ರತಿನಿತ್ಯ 8 ಬಾರಿ ನೀರು ಪೂರೈಸುತ್ತಿವೆ.
ತುಂಗಭದ್ರಾ ಜಲಾಶಯದಿಂದ ಪಾವಗಡ ತಾಲೂಕಿಗೆ ಸುಮಾರು 180 ಕಿ.ಮೀ. ಅಂತರವಿದೆ. ಜಲಾಶಯದ ನೀರಿನ ಮಟ್ಟ 470 ಮೀಟರ್ ಇದ್ದರೆ, ಪಾವಗಡ ತಾಲೂಕು ಸಮುದ್ರದ ಮಟ್ಟದಿಂದ 650 ಮೀಟರ್ ಎತ್ತರದಲ್ಲಿದೆ. ಈ ಅಂತರದಲ್ಲಿ ನೀರು ಪೂರೈಸಲು ಸುಮಾರು 1100 ಮೀಟರ್ ಎತ್ತರಕ್ಕೆ ಪೈಪ್ ಲೈನ್ ಸಂಪರ್ಕ ಕಲ್ಪಿಸಬೇಕಿದೆ. ಪಾವಗಡ ತಾಲೂಕಿನ ಒಟ್ಟಾರೆಯಾಗಿ 2.5ರಿಂದ 3 ಟಿಎಂಸಿ ನೀರು ಪೂರೈಕೆಯ ಅಗತ್ಯವಿದೆ.
ಜಲಾಶಯದಿಂದ ಪಾವಗಡ ತಾಲೂಕಿಗೆ ಶಾಶ್ವತ ನೀರು ಪೂರೈಸುವ ಸಂಬಂಧ ಶಾಶ್ವತ ಯೋಜನೆ ರೂಪಿಸಲು ಜನವರಿ 6ರಂದು ಗುತ್ತಿಗೆದಾರರಿಂದ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕವಾಗಿದೆ. ಜನವರಿ 15ರಂದು ಗುತ್ತಿಗೆಯನ್ನು ಅಂತಿಮಗೊಳಿಸಲಾಗುವುದು. ಕೆಲಸದ ಆದೇಶ ದೊರೆತ ಮೂರು ತಿಂಗಳ ನಂತರ ಗುತ್ತಿಗೆದಾರರು ಯೋಜನೆಯ ಸ್ಥಿತಿಗತಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇದರ ಆಧಾರದ ಮೇಲೆ ನೀರು ಪೂರೈಕೆಯ ಮೂಲವನ್ನು ಅಂತಿಮಗೊಳಿಸಲಾಗುವುದು ಎಂದು ಪಂಚಾಯತ್ ರಾಜ್ ಇಲಾಖೆ ಮುಖ್ಯ ಕಾರ್ಯದರ್ಶಿ ಪಂಪಾಪತಿ ರೆಡ್ಡಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement