ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶೇಂಗಾಗೆ ಬೆಂಬೆಲೆ ಘೋಷಿಸಿ

Mainashree
Updated On : 2 Jan 2014, 10:26 am

ತುಮಕೂರು: ಶೇಂಗಾಗೆ ಬೆಂಬಲ ಬೆಲೆ ಘೋಷಿಸಿ, ರೈತರ ಸಂಕಷ್ಟಕ್ಕೆ ನೆರವಾಗಿ ಎಂದು ಪಾವಗಡ ಶಾಸಕ ಕೆ.ಎಂ. ತಿಮ್ಮರಾಯಪ್ಪ ಸರ್ಕಾರವನ್ನು ಮನವಿ ಮಾಡಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಾವಗಡ ತಾಲೂಕಿನಲ್ಲಿ ಶೇಂಗಾ ಬೆಳೆ ಪ್ರಧಾನ ಬೆಳೆಯಾಗಿದ್ದು ಮಳೆಯನ್ನೇ ಆಶ್ರಯಿಸಿ ಫಸಲು ತೆಗೆಯಬೇಕಾಗಿದೆ. ಈ ಬಾರಿ ಅಲ್ಪಸ್ವಲ್ಪ ಮಳೆಯಾಗಿದ್ದು ಸ್ವಲ್ಪ ಮಟ್ಟಿಗೆ ಶೇಂಗಾ ಬೆಳೆ ಆಗಿದೆ. ಆದರೆ ಶೇಂಗಾ ಬೆಳೆದ ರೈತನಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹೀಗಾಗಿ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ ಎಂದರು.
ರೈತ ಉಳುಮೆ ಮಾಡಿ, ಬೀಜ ಬಿತ್ತಿ, ಕಳೆ ತೆಗೆದು, ಫಸಲು ಕೈಗೆ ಬರುವವರೆಗೆ ಆತ ಮಾಡಿದ ಉತ್ಪಾದನಾ ವೆಚ್ಚವೇ ಇಂದು ಹೆಚ್ಚುತ್ತಿದೆ. ವ್ಯವಸಹಾಯ ಸೇವಾ ಸಹಕಾರ ಸಂಘಗಳ ಮೂಲಕ ಸರ್ಕಾರ ಈ ಹಿಂದೆ ಕ್ವಿಂಟಾಲ್ ಒಂದಕ್ಕೆ 5 ಸಾವಿರಕ್ಕಿಂತ ಹೆಚ್ಚು ಹಣ ಪಡೆದು ರೈತರಿಗೆ ಶೇಂಗಾ ಮಾರಾಟ ಮಾಡಿದೆ ಎಂದರು.
ಇನ್ನೂ ಬಿತ್ತನೆ ಬೀಜ ಅಂಗಡಿಗಳ ಮೂಲಕ 7500 ರು. ನೀಡಿ ಖರೀದಿ ಮಾಡಿ ಬಿತ್ತನೆ ಮಾಡಿದ್ದರೆ ರೈತನಿಗೆ ಈಗ ಫಸಲು ಕೈಗೆ ಬಂದಾಗ ಬೆಂಬಲ ಬೆಲೆ ಸಿಗುತ್ತಿಲ್ಲ. ಕ್ವಿಂಟಾಲ್ ಒಂದಕ್ಕೆ ಈಗ ಕೇವಲ 3200 ರಿಂದ ಬೆಲೆ ನಿಗದಿ ಮಾಡಲಾಗುತ್ತಿದೆ. ಈ ತಾರತಮ್ಯ ಬದಲಾಗಬೇಕು.
ಸರ್ಕಾರವೇ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಲು ನಾಫೆಡ್ ಖರೀದಿ ಕೇಂದ್ರ ತೆರೆದಿದೆ. ಇದೇ ರೀತಿ ಶೇಂಗಾ ಬೆಳೆಗೂ ಸರ್ಕಾರವೇ ಖರೀದಿ ಕೇಂದ್ರಗಳನ್ನು ತೆರೆದು ಗರಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವ್ಯವಸ್ಥೆಗೆ ಹಿಡಿದ ಕನ್ನಡಿ: ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ನೀರನ್ನು ಜನ ಕುಡಿಯುವ ಸ್ಥಿತಿ 21ನೇ ಶತಮಾನದಲ್ಲಿನ ನಾಗರಿಕ ಸರ್ಕಾರಗಳ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಸಾವಿರಾರು ಕೋಟಿ ರು.ಗಳ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ಖರ್ಚು ಮಾಡುತ್ತವೆ. ಪಾವಗಡದಂತಹ ಅತಿ ಹಿಂದುಳಿದ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸಲು ನಾಗರಿಕ ಸರ್ಕಾರಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಡಿ ಫ್ಲೋರೈಡ್ ಘಟಕಗಳನ್ನು ಕೆಲವೇ ಕೆಲವು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಇದರ ವಿಸ್ತರಣೆಯಾಗಬೇಕು. ಕೃಷ್ಣ ಕೊಳ್ಳದಿಂದಲೋ, ತುಂಗಭದ್ರ ಮೂಲದಿಂದಲೋ, ಹೇಮಾವತಿಯಿಂದಲೋ ಅಥವಾ ಕಾವೇರಿಯಿಂದಲೋ ಪಾವಗಡಕ್ಕೆ ಶಾಶ್ವತ ನೀರಿನ ಸೌಲಭ್ಯ ಒದಗಿಸಿದಾಗ ಮಾತ್ರ ಇಲ್ಲಿನ ರೈತ ಸಂಕಷ್ಟಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದರು.
ತಾಲೂಕಿನಲ್ಲಿ ವಸತಿ ಸೌಲಭ್ಯವನ್ನು ಸಮರ್ಪಕವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ. ಇದಕ್ಕೆ ಸರ್ಕಾರಗಳ ನೀತಿಗಳೇ ಕಾರಣ. ಸರ್ಕಾರ ದಿನಕ್ಕೊಂದು ನೀತಿಯನ್ನು ತಂದು ವಸತಿ ಯೋಜನೆ ವಿಳಂಬವಾಗಲು ನೇರ ಕಾರಣವಾಗಿದೆ ಎಂದರು.
ಇನ್ನು ಗ್ರಾಮಸಭೆ, ವಾರ್ಡ್‌ಸಭೆ ಎಂದು ಹೇಳಿಕೊಂಡು ಅಧಿಕಾರಿಗಳು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಶಿಥಿಲಗೊಂಡ ಮನೆ, ಗುಡಿಸಲು ಮನೆ,  ಹಂಚಿನ ಮನೆ ಇರುವವರಿಗೆ ಆದ್ಯತೆ ಮೇರೆಗೆ ಪಂಚಾಯಿತಿವಾರು ಪಟ್ಟಿ ಮಾಡಿ ಕ್ರಮಾನುಸಾರ ಮನೆಗಳನ್ನು ಹಂಚುವ ಬದಲು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement