ಶೈಕ್ಷಣಿಕ ಅಸಮತೋಲನ ಹೋಗಲು ಎಜುಸ್ಯಾಟ್ ಸಹಕಾರಿ
ತುಮಕೂರು: ದೇಶದಲ್ಲಿ ಶೈಕ್ಷಣಿಕ ಅಸಮತೋಲನ ಹೋಗಲಾಡಿಸಲು ಎಜುಸ್ಯಾಟ್ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಆರ್ಯಭಾರತಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಕೆ.ಆರ್. ಅಶೋಕ ಅಭಿಪ್ರಾಯಪಟ್ಟರು.
ಹೊಸವರ್ಷದ ಉಡುಗೊರೆಯಾಗಿ ಆರ್ಯಭಾರತಿ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳಿಗೆ ಎಜುಸ್ಯಾಟ್ ಸೌಲಭ್ಯವನ್ನು ನೀಡುವ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಅವರು ಇಂದು ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಕಲಿಕಾ ವ್ಯವಸ್ಥೆಗಳಿದ್ದು ಅವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಶಿಕ್ಷಣ ಕ್ರಮವು ಇಂದು ಬದಲಾವಣೆಯ ಮಜಲಿನಲ್ಲಿದ್ದು ಪ್ರಗತಿಯ ಹಾದಿಯಲ್ಲಿ ಸಾಗಲು ಶಿಕ್ಷಣ ಕ್ಷೇತ್ರಕ್ಕೆ ತಾಂತ್ರಿಕತೆಯ ಸ್ಪರ್ಶ ನೀಡುತ್ತಿರುವುದು ಶ್ಲಾಘನೀಯ. ಎಜುಸ್ಯಾಟ್ (ಉಪಗ್ರಹ ಆಧಾರಿತ ಶಿಕ್ಷಣ) ಕಾರ್ಯಕ್ರಮ ದೇಶದಲ್ಲಿ ಶೈಕ್ಷಣಿಕ ಅಸಮತೋಲನವನ್ನು ಹೋಗಲಾಡಿಸಲು ಸಹಕಾರಿಯಾಗಿದೆ ಎಂದರು.
ನೇರ ಲಭ್ಯ: ಗ್ರಾಮೀಣ ಹಾಗೂ ಪಟ್ಟಣ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿರುವ ಶೈಕ್ಷಣಿಕ ಪ್ರಗತಿಯ ಅಂತರವನ್ನು ಕಡಿಮೆ ಮಾಡಲು ಮತ್ತು ದೇಶದ ಎಲ್ಲಾ ಮಕ್ಕಳಿಗೂ ಏಕರೂಪ ಶಿಕ್ಷಣ ಸೌಲಭ್ಯವನ್ನು ಕಲ್ಪಿಸಲು ಇಂದು ವಾಸ್ತವಿಕ (ವರ್ಚುವಲ್) ತರಗತಿಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಪಗ್ರಹ ಆಧಾರಿತ ಶಿಕ್ಷಣ ಇಂದಿನ ಶಿಕ್ಷಕ ಕೇಂದ್ರಿತ ಶೈಕ್ಷಣಿಕ ಕ್ರಮಕ್ಕೆ ಪರ್ಯಾಯ ಶಿಕ್ಷಣ ಕ್ರಮವನ್ನು ತಾಂತ್ರಿಕತೆಯ ಸೊಬಗಿನೊಂದಿಗೆ ವಿದ್ಯಾರ್ಥಿಗಳಿಗೆ ನೇರವಾಗಿ ಲಭ್ಯವಾಗುವಂತೆ ಮಾಡಿದೆ ಎಂದರು.
ಈ ರೀತಿಯ ಎಜುಸ್ಯಾಟ್ ಶಿಕ್ಷಣವನ್ನು ನೀಡುತ್ತಿರುವ ಜಿಲ್ಲೆಯ ಪ್ರಥಮ ಖಾಸಗಿ ಪಾಲಿಟೆಕ್ನಿಕ್ ಎಂಬ ಪ್ರಶಂಸೆಗೆ ಆರ್ಯಭಾರತಿ ಪಾಲಿಟೆಕ್ನಿಕ್ ಭಾಜನವಾಗಿದೆ ಎಂದು ತಿಳಿಸಿದರು.
ಯಶಸ್ವಿ: ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲ ಡಾ. ಎಂ. ಕೆ. ವೀರಯ್ಯನವರು ಇಂದು ಪ್ರಪಂಚದಾದ್ಯಂತ ಹಲವಾರು ವಿಶ್ವವಿದ್ಯಾನಿಲಯಗಳು ಈ ರೀತಿಯ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪರಿಣಾಮಾತ್ಮಕವಾದ ಶಿಕ್ಷಣವನ್ನು ಎಲ್ಲರಿಗೂ ನೀಡುತ್ತಿದ್ದು, ಹಿಂದಿನ ಗುರುಕುಲ ಪದ್ಧತಿಯ ಹಲವಾರು ನ್ಯೂನತೆಗಳನ್ನು ಹಾಗೂ ಶೈಕ್ಷಣಿಕ ಅಸಮತೋಲನವನ್ನು ಹೋಗಲಾಡಿಸಲು ಯಶಸ್ವಿಯಾಗಿದೆ ಎಂದರು.
ಸಂಸ್ಥೆಯ ಗೌ. ಕಾರ್ಯದರ್ಶಿ ಹಾಗೂ ತುಮಕೂರು ನಗರಸಭೆ ಮಾಜಿ ಅಧ್ಯಕ್ಷ ಆರ್. ಎನ್. ಸತ್ಯನಾರಾಯಣ ಅವರು ಮಾತನಾಡಿ ಇಂದಿನ ಶಿಕ್ಷಣಕ್ರಮದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು ಮಕ್ಕಳ ಬುದ್ಧಿಮಟ್ಟ ಹೆಚ್ಚಾಗಿದೆ ಮತ್ತು ಕಲಿಕಾಮಟ್ಟ ಉನ್ನತವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಖ್ಯಾತ ಲೆಕ್ಕ ಪರಿಶೋಧಕ ಮತ್ತು ಸಂಸ್ಥೆಯ ಗೌ. ಅಧ್ಯಕ್ಷ ಕೆ. ನರಸಿಂಹಮೂರ್ತಿ ವಹಿಸಿದ್ದರು. ಸಂಸ್ಥೆಯ ಗೌ. ಖಜಾಂಚಿ ಡಿ. ನಾರಾಯಣ್, ಉಪಪ್ರಾಂಶುಪಾಲ ಬಿ. ವಿ. ರಾಜೇಂದ್ರಕುಮಾರ್, ಎಂ. ಹನುಮಂತಯ್ಯ, ಟಿ. ಪಿ.ಮಂಜುಳ, ನಂದಾರಾಜ್, ಬಿ.ವೈ. ಮಲ್ಲೇಶ್ ನಿರೂಪಿಸಿದರು.