ಸತ್ತ ಜಾನುವಾರು ಜೊತೆ ಪ್ರತಿಭಟನೆ
ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ವಿವಿಧೆಡೆಯಲ್ಲಿ ವ್ಯಾಪಕವಾಗಿರುವ ಚಿರತೆ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ, ಗುರುವಾರ ವಿವಿಧ ಗ್ರಾಮಗಳ ಗ್ರಾಮಸ್ಥರು, ಚಿರತೆ ಹಾವಳಿಗೆ ಮೃತಪಟ್ಟ ಜಾನುವಾರುಗಳ ಮೃತದೇಹಗಳನ್ನು ವಲಯ ಅರಣ್ಯಾಧಿಕಾರಿ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಹುಲಿಯೂರುದುರ್ಗ ಹೋಬಳಿಯ ಚಲಮಸಂದ್ರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಗ್ರಾಮಕ್ಕೆ ನುಗ್ಗಿದ ಚಿರತೆ, ಪ್ರಕಾಶ, ಮೋಟಮ್ಮ ಎಂಬವವವರಿಗೆ ಸೇರಿದ ಮೇಕೆಯ ಮಂದೆ ಮೇಲೆ ದಾಳಿ ನಡೆಸಿ, ಎಂಟಕ್ಕೂ ಹೆಚ್ಚು ಮೇಕೆಗಳನ್ನು ಕೊಂದು, ಕೆಲವನ್ನು ಹೊತ್ತಯ್ದಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಈ ಗ್ರಾಮದ ಸುತ್ತಮುತ್ತಲ ಗ್ರಾಮಗಳಾದ ನಿಡಸಾಲೆ, ಬೀಸೆಗೌಡನ ದೊಡ್ಡಿ, ಕಬ್ಬಳ್ಳಿ, ಪಿ.ಹೊನ್ನಮಾಚನಹಳ್ಳಿ ವ್ಯಾಪ್ತಿಯಲ್ಲೂ ಅನೇಕ ಜಾನುವಾರುಗಳನ್ನು ಚಿರತೆ ಕೊಂದಿದೆ.
ಗುರುವಾರ ಚಲಮಸಂದ್ರ ಘಟನೆಯಿಂದ ಬೇಸತ್ತ ಗ್ರಾಮಸ್ಥರು, ಸತ್ತ ಮೇಕೆಯ ದೇಹದೊಂದಿಗೆ ಹುಲಿಯೂರುದುರ್ಗದಲ್ಲಿರುವ ತಾಲೂಕು ವಲಯಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಇಟ್ಟು, ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್, ತಾಲೂಕಿನ ವಿವಿಧೆಡೆಯಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹೇಳಿದರೆ ತಮ್ಮದೇ ಆದ ಸಮಸ್ಯೆ ಮುಂದಿಡುತ್ತಾರೆ. ಚಿರತೆ ಹಿಡಿಯಲು ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿ, ಚಿರತೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ಇದುವರೆಗೂ ಚರತೆ ಹಾವಳಿಯಿಂದ ಮೃತಪಟ್ಟಿರುವ ಜಾನುವಾರುಗಳಿಗೆ ಮಾರುಕಟ್ಟೆ ಬೆಲೆಯ ಪರಿಹಾರ ಕೊಡುವಂತೆ ಆಗ್ರಹಿಸಿದರು.
ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಪ್ರಾರಂಭಿಸಿದ ಕಾರಣ, ವಾಹನಸಂಚಾರಕ್ಕೆ ಅಡಚಣೆಯಾಗಿ ಪೊಲೀಸರು ಆಗಮಿಸಿದರು. ಈ ಹಂತದಲ್ಲಿ ಅರಣ್ಯ ಇಲಾಖಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಿಎಸೈ ರಂಜನಕುಮಾರ್ ಸಮಾಧಾನಗೊಳಿಸಿದರು. ಕೊನೆಗೆ ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಎಂದಿನಂತೆ ಬೋನ್ ಇಟ್ಟು ಚಿರತೆ ಹಿಡಿಯುವ, ಮೃತಪಟ್ಟ ಜಾನುವಾರುಗಳಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.