ಸರಳ ವಿವಾಹಗಳಿಗೆ ಪ್ರೋತ್ಸಾಹವಿಲ್ಲ
ಕ.ಪ್ರ.ವಾರ್ತೆ ತುಮಕೂರು ಜ.2
ಸರಳ ವಿವಾಹಗಳಿಗೆ ಪ್ರೋತ್ಸಾಹವಿಲ್ಲ. ವರದಕ್ಷಿಣೆ ವಿರೋಧಿಸುವ ಧೈರ್ಯವೂ ಇಲ್ಲದಂತಹ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ವಕೀಲ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್ ವಿಷಾದಿಸಿದರು.
ಅವರು ಧಾನ್ ಪೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಳಂಜಿಯಂ ಚಳುವಳಿ ದಿನಾಚರಣೆ ಅಂಗವಾಗಿ ಏರ್ಪಾಟಾಗಿದ್ದ ಮಹಿಳಾ ಜಾಗೃತಿ, ಕಾನೂನು-ಅರಿವು-ನೆರವು ಹಾಗೂ ಕಳಂಜಿಯಂ ದೀಪಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಮೌಲ್ಯಗಳೇನೇ ಇವೆ. ಆದರೆ ಆಯ್ಕೆ ಮಾಡಿಕೊಳ್ಳುವ ಮಾರ್ಗ, ಧೈರ್ಯ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಸರಳ ವಿವಾಹ ಉತ್ತಮ ಎಂಬ ಹೇಳಿಕೆ ಬಾಯ್ಮಾತಿಗೆ ಸೀಮಿತವಾಗಿದೆಯಷ್ಟೇ. ಆದರೆ ಸರಳ ವಿವಾಹವಾಗಲು ಬಹುತೇಕ ಯಾರೂ ಸಿದ್ಧರಿಲ್ಲ. ಸರ್ಕಾರದಿಂದ ಪ್ರೋತ್ಸಾಹವೂ ಇಲ್ಲ. ಇನ್ನು ವರದಕ್ಷಿಣೆ ಪಡೆಯದೇ ಮದುವೆಯಾಗುತ್ತೇನೆಂಬ ಆತ್ಮವಿಶ್ವಾಸ, ಧೈರ್ಯ ವಿವಾಹವಾಗುವವರಿಗೆ ಬರುತ್ತಿಲ್ಲ. ಹೋಗಲಿ ಆಡಂಬರದ ವಿವಾಹವಾಗಿರುವವರೆಲ್ಲಾ ಸಾಂಸಾರಿಕವಾಗಿ ಚೆನ್ನಾಗಿದ್ದಾರೆಯೇ ಎಂಬುದು ಪ್ರಶ್ನಾರ್ಹವಾಗಿದ್ದು, ಸಂಘ-ಸಂಸ್ಥೆಗಳು ಜನರಲ್ಲಿರುವ ಈ ಮನೋಭೂಮಿಕೆಯನ್ನು ಅಳಿಸಲು ನಿರಂತರವಾಗಿ ಪ್ರಯತ್ನಿಸುವಂತೆ ಕರೆ ನೀಡಿದರು.
ಗಾಬರಿ ಹುಟ್ಟಿಸುತ್ತಿದೆ: ಲೇಖಕಿ ಎಂ.ಸಿ. ಲಲಿತಾ ಮಾತನಾಡಿ, ವರದಕ್ಷಿಣೆ ನಿಷೇಧ ಕಾಯ್ದೆಯಿದ್ದರೂ, ಸಮಸ್ಯೆ ಭೀಕರವಾಗುತ್ತಲೇ ಇದೆ. ವರದಕ್ಷಿಣೆ ಕಿರುಕುಳ ಹಾಗೂ ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅತ್ಯಾಚಾರ ಪ್ರಕರಣಗಳು ಸಹ ಗಾಬರಿ ಹುಟ್ಟಿಸುತ್ತಿದ್ದು, ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಹೀನ ಕೃತ್ಯ ನಾಚಿಕೆಗೇಡಿನ ವಿಷಯ. ಇದೆಲ್ಲದರಿಂದ ಸಮಾಜದಲ್ಲಿ ಭಯದ ವಾತಾವರಣ ಉಂಟಾಗುತ್ತಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದೆಂದು ಕರೆ ನೀಡಿದರಲ್ಲದೆ, ಇಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ನೊಂದ ಮಹಿಳೆಯರ ಪರವಾಗಿ ಸಂಘ-ಸಂಸ್ಥೆಗಳು ಕ್ರಿಯಾಶೀಲರಾಗಬೇಕಿದೆ ಎಂದರು.
ಉತ್ತಮ ವಾತಾವರಣ: ಮಹಿಳೆಯರ ಆರೋಗ್ಯ ಹಾಗೂ ಭ್ರೂಣ ಹತ್ಯೆ ಕುರಿತು ಮಾತನಾಡಿದ ಸ್ತ್ರೀ ರೋಗ ತಜ್ಞರಾದ ಡಾ.ಎಚ್.ಎಸ್. ಲಲಿತಾ, ದುಡಿಮೆಯ ಜತೆಗೆ ಮಹಿಳೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡಿಕೊಂಡರೆ ಇಡೀ ಕುಟುಂಬ ಸುಖೀ ಸಂಸಾರವಾಗುತ್ತದೆ. ಮಕ್ಕಳನ್ನು ಹೆರುವುದಷ್ಟೇ ಮಹಿಳೆಯರ ಕೆಲಸವಲ್ಲ. ಆ ಮಕ್ಕಳು ಸತ್ಪ್ರಜೆಗಳಾಗಬೇಕು. ಶಾಲಾ ಪದವಿ ಜತೆಗೆ ಸಾಮಾಜಿಕ ಪದವಿಯನ್ನು ಮಕ್ಕಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ವಾತಾವಾರಣ ನಿರ್ಮಾಣ ಮಾಡುವಂತೆ ಮಹಿಳೆಯರಿಗೆ ಕರೆ ನೀಡಿದರು.
ಧಾನ್ ಫೌಂಡೇಶನ್ನ ಪ್ರಾದೇಶಿಕ ಸಂಯೋಜಕ ಎಚ್.ಸಿ. ಗೌಡ ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ 5 ಒಕ್ಕೂಟಗಳು ರಚನೆಯಾಗಿವೆ. 1200 ಸ್ವ ಸಹಾಯ ಸಂಘಗಳ ಮೂಲಕ 18 ಸಾವಿರ ಕುಟುಂಬಗಳನ್ನು ತಲುಪಿದ್ದೇವೆ. ನಮ್ಮ ಸಂಸ್ಥೆಯಿಂದ ಕಳಂಜಿಯಂ ಜ್ಯೋತಿ ನಿಧಿ ಸ್ಥಾಪಿಸಿದ್ದು, ಸದಸ್ಯರ ಬಡ ಕುಟುಂಬಗಳಿಗೆ ಸಹಕಾರಿಯಾಗಲೆಂದು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಿ.ಬಿ. ಸವಿತಾ, ಎನ್. ಉಷಾರಾಣಿ, ಸುಜಾತ, ಎಸ್.ಪಿ. ಕರಿಯಮ್ಮ, ವೇದಾವತಿ, ಚಿಕ್ಕಮ್ಮ ಇತರರು ಉಪಸ್ಥಿತರಿದ್ದರು.