ಸುದ್ದಿ ಸಂಕ್ಷೇಪ
ಜಿಎಸ್ಬಿ ವಿರುದ್ಧ ಹೇಳಿಕೆಗೆ ಖಂಡನೆ
ತುಮಕೂರು: ಸಂಸದ ಜಿ.ಎಸ್. ಬಸವರಾಜು ವಿರುದ್ಧ ತಿಪಟೂರಿನ ಕೆಜೆಪಿ ಮುಖಂಡ ಲೋಕೇಶ್ವರ್ ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಜೆಪಿ ಮುಖಂಡರಾದ ಬಿ.ಬಿ. ಮಹದೇವಯ್ಯ, ಹೆಚ್.ಆರ್. ಲೋಕೇಶ್, ವಾಲೆಚಂದ್ರಯ್ಯ ಆರೋಪಿಸಿದ್ದಾರೆ. ಜಿ.ಎಸ್. ಬಸವರಾಜ್ ವಿರುದ್ಧ ವಿನಾಕಾರಣ ಸುಳ್ಳು ಹೇಳಿಕೆ ನೀಡಿರುವುದು ಇವರ ಹತಾಶ ಮನೋಭಾವನೆಯನ್ನು ತೋರುವುದಲ್ಲದೆ ಉದ್ದೇಶಪೂರ್ವಕವಾಗಿ ಜಿ.ಎಸ್. ಬಸವರಾಜು ಅವರ ತೇಜೋವಧೆ ಮಾಡಿ ಪಕ್ಷದಲ್ಲಿ ತನ್ನ ವರ್ಚಸನ್ನು ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ ಎಂದರು. ಜಿ.ಎಸ್. ಬಸವರಾಜು ಅವರು ಯಡಿಯೂರಪ್ಪ ಅವರಿಗೆ ವಿರುದ್ಧವಾದ ಹೇಳಿಕೆ ನೀಡದಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆ ಎಳೆದು ಜಿ.ಎಸ್. ಬಸವರಾಜು ಅವರ ಮೇಲೆ ತಪ್ಪು ಭಾವನೆ ಬರುವಂತೆ ಮಾಡಿರುವ ತಂತ್ರವಾಗಿದೆ ಎಂದಿದ್ದಾರೆ. ಜಿ.ಎಸ್. ಬಸವರಾಜು ಅವರು ಈಗಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ವಿಶ್ವಾಸದಿಂದಲೇ ಇದ್ದಾರೆ. ಅರ್ಥ ಮಾಡಿಕೊಳ್ಳದ ಲೋಕೇಶ್ವರ್ ಅವರು ಈಗಲಾದರೂ ತಮ್ಮ ತಪ್ಪನ್ನು ಅರಿತು ಬಸವರಾಜು ಅವರಲ್ಲಿ ಕ್ಷಮೆ ಕೋರುವುದು ಒಳ್ಳೆಯದು ಎಂದಿದ್ದಾರೆ.
ಪೊಲೀಸರ ಮೇಲೆ ಹಲ್ಲೆ
ತುಮಕೂರು: ಆರು ಮಂದಿ ವ್ಯಕ್ತಿಗಳು ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರಲ್ಲಿ ನಡೆದಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪೇದೆ ರಾತ್ರಿ ಬೀಟಿನಲ್ಲಿದ್ದಾಗ ಬೈಕ್ ಮೇಲೆ ಟ್ರಿಬಲ್ ರೈಡ್ ಮಾಡಿದ್ದನ್ನು ಪ್ರಶ್ನೆ ಮಾಡಿದ್ದೆ ತಪ್ಪೆಂದ ಕಿಡಗೇಡಿಗಳು ನಾವು ಪತ್ರಕರ್ತರು ಎಂದು ಸುಳ್ಳು ಹೇಳಿ ಜಯಪ್ರಕಾಶ್ ಎಂಬ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಶ್ರೇಯಾಂಕ್, ಆನಂದ್, ಶ್ರೀಕಾಂತ್, ಜಾನ್, ಹೇಮಂತ್, ಶ್ರೇಯಸ್ ಎಂಬುವರು ಹಲ್ಲೆ ಮಾಡಿ ಈಗ ತುಮಕೂರು ಹೊಸ ಬಡಾವಣೆ ಪೊಲೀಸರ ಅತಿಥಿಯಾಗಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಪೇದೆ ತುಮಕೂರಿನ ಆದಿತ್ಯಾ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡಸೂರು ಪಂ.ಗೆ ಬೀಗ
ತಿಪಟೂರು: ತಾಲೂಕಿನ ಕಸಬಾ ಹೋಬಳಿ ತಡಸೂರು ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆಗೊಂದು ಶೌಚಾಲಯ ನಿರ್ಮಾಣ ಯೋಜನೆಯ ಅನುದಾನ ಹಣವನ್ನು ನೀಡಲು ತಿಂಗಳುಗಟ್ಟಲೆ ಫಲಾನುಭವಿಗಳನ್ನು ಅಲೆದಾಡಿಸುತ್ತಿದ್ದ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಪಂಚಾಯಿತಿಗೆ ವ್ಯಾಪ್ತಿಯ ನೂರಾರು ಫಲಾನುಭವಿಗಳು ಪಂಚಾಯ್ತಿ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆಯಿತು.