ಎಂಪ್ರೆಸ್ ಶಾಲಾಭಿವೃದ್ಧಿಗೆ ಅಗತ್ಯ ನೆರವು
ತುಮಕೂರು: ಶತಮಾನ ಪೂರೈಸಿರುವ ಒಂದು ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮತ್ತು ಅವರಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರು ಇಬ್ಬರು ಅದೃಷ್ಟವಂತರು ಎಂದು ಶಾಸಕ ಡಾ.ರಫೀಕ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಂಪ್ರೆಸ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಾಲೆಗೆ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಒಂದು ಕೊಠಡಿ ನಿರ್ಮಿಸಿಕೊಡುವುದಾಗಿ ಶಾಸಕರು ಇದೇ ವೇಳೆ ಭರವಸೆ ನೀಡಿದರು.
ವಿದ್ಯಾರ್ಥಿಗಳಿಗೆ ತಾವು ಮುಂದೇನಾಗಬೇಕು ಎಂಬ ಸ್ಪಷ್ಟ ಗುರಿಯಿರಬೇಕು. ಇಲ್ಲದಿದ್ದರೆ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ನಾನು ಕೂಡ ಒಂದರಿಂದ 10ನೇ ತರಗತಿಯವರಗೆ ಸರಕಾರಿ ಶಾಲೆಯಲ್ಲಿಯೇ ಓದಿದ್ದು, ಒಂದು ನಿರ್ದಿಷ್ಟ ಗುರಿ ಹೊಂದಿದ್ದ ಕಾರಣ ಇಂಜಿನಿಯರ್ನಲ್ಲಿ ಪಿಹೆಚ್.ಡಿ ಪದವಿ ಪಡೆದು ಇಂದು ಶಾಸಕನಾಗಿ ತಮ್ಮ ಮುಂದೆ ನಿಂತಿದ್ದೇನೆ. ಆದ್ದರಿಂದ ಪ್ರತಿಯೊಬ್ಬರು ಒಂದು ಉನ್ನತ ಕನಸು ಹೊಂದುವುದು ಸೂಕ್ತವೆಂದರು.
ಇಂದು ಈ ವೇದಿಕೆಯಲ್ಲಿ 11 ಜನ ವಿದ್ಯಾರ್ಥಿನಿಯರು ಪ್ರತಿಭಾ ಪುರಸ್ಕಾರಕ್ಕೆ ಬಾಜನರಾಗುತ್ತಿದ್ದಾರೆ.ಅವರ ರೀತಿಯಲ್ಲಿಯೇ ನೀವುಗಳು ಸಹ ಮುಂದಿನ ಬಾರಿ ಈ ವೇದಿಕೆ ಹತ್ತುವಂತಹ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದ ಡಾ.ರಫೀಕ್ ಅಹಮದ್ ನಮ್ಮ ಸರಕಾರ ಸರಕಾರ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಸಲುವಾಗಿ ರು.15 ಕೋಟಿ ಮೀಸಲಿರಿಸಿದೆ. ಇದರ ಜೊತೆಗೆ ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಯನ್ನು ಪಿಯುಸಿವರೆಗೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದರು.
ನೂರು ವರ್ಷ ತುಂಬಿರುವ ಶಾಲೆಯಲ್ಲಿ ಕಲಿಯುತ್ತಿರುವ ನೀವುಗಳು ಪಿಯುಸಿಯ ನಂತರ ಓದಲು ಅನುಕೂಲವಾಗುವಂತೆ ನಮ್ಮ ಸರಕಾರ ನಿಮ್ಮ ಕಾಲೇಜು ಆವರಣದಲ್ಲಿಯೇ ಮಹಿಳಾ ಪದವಿ ಕಾಲೇಜು ತೆರೆಯಲು ಮುಂದಾಗಿದೆ. ಆಗ ನಿಮಗೆ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದ ಅವರು, ತುಮಕೂರು ನಗರಪಾಲಿಕೆಗೆ ಪ್ರತಿವರ್ಷ ಬರುವ ರು.100 ಕೋಟಿ ಗಳಲ್ಲಿ ಶೇ 3 ರಷ್ಟನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ತೆಗೆದಿರಿಸಲಾಗುವುದು ಎಂದು ಡಾ.ರಫೀಕ್ ಅಹಮದ್ ಭರವಸೆ ನೀಡಿದರು.
ವಿಜ್ಞಾನ ಹಾಗೂ ಟಾಟಾ ಅಡ್ವಾನ್ಸ್ ತಾಂತ್ರಿಕ ಉಪಾಧ್ಯಕ್ಷ ಸಿ.ಆರ್. ಸತ್ಯ ಮಾತನಾಡಿ, ಮಕ್ಕಳು ಮೂಲ ವಿಜ್ಞಾನದ ಕಡೆಗೆ ಹೆಚ್ಚಿನ ಒಲವು ತೋರಬೇಕು. ಯಾವುದೇ ವಸ್ತು, ವಿಷಯದ ಬಗ್ಗೆ ಕುತೂಹಲ ಹೊಂದುವ ಮೂಲಕ ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯಲು ಪ್ರಶ್ನಿಸುವುದನ್ನು ಕಲಿಯಬೇಕಾಗಿದೆ. ಸತತ ಅಭ್ಯಾಸ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಮೂಲಕ ವಿಜ್ಞಾನಿಗಳಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ರಾಕೆಟ್ ಉಡಾವಣೆ, ಅದಕ್ಕೆ ಬಳಸುವ ಇಂಧನ, ಚಂದ್ರಯಾನ,ಪಿಎಸ್ಎಲ್ವಿ ಉದ್ದೇಶ ಕುರಿತಂತೆ ವಿದ್ಯಾರ್ಥಿಗಳಿಂದ ಬಂದ ಪ್ರಶ್ನೆಗೆ ಉತ್ತರಿಸುವ ಮೂಲಕ ವಿಜ್ಞಾನ-ತಂತ್ರಜ್ಞಾನ ಮತ್ತು ರಾಕೆಟ್ ವಿಜ್ಞಾನಿ ಡಾ.ಅಬ್ದುಲ್ ಕಲಾಂ ಅವರ ಒಡನಾಟ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಈಶ್ವರಯ್ಯ ಮಾತನಾಡಿ, ತುಮಕೂರು ನಗರದ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎಂಪ್ರೆಸ್ ಶಾಲೆ ಗ್ರಾಮೀಣ ಭಾಗದ 10 ಶಾಲೆಗಳಿಗೆ ಸಮ. 1500 ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, 100 ವರ್ಷ ಪೂರೈಸುತ್ತಿರುವ ಇಂತಹ ಶಾಲೆಯ ಅಭಿವೃದ್ಧಿಗೆ ಸಾರ್ವಜನಿಕರು, ಸಂಘಸಂಸ್ಥೆಗಳು ಕೈಜೋಡಿಸಬೇಕೆಂದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು. ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮರುಳಯ್ಯ, ಉಪ ಪ್ರಾಂಶುಪಾಲೆ ಎಲ್. ಪದ್ಮಾವತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.