'ಖಾತ್ರಿ'ಯಲ್ಲಿ ಅನ್ಯಾಯ: ಆಕ್ರೋಶ
ಪಾವಗಡ: ಸರ್ಕಾರಿ ನಿಯಮ ಉಲ್ಲಂಘಿಸಿ ತಾಲೂಕಿನ ಯರಪಾಳ್ಯ ಗ್ರಾಮದ ಹೊರ ವಲಯದಲ್ಲಿ ಖಾತ್ರಿ ಯೋಜನೆ ಕಾಮಗಾರಿಗಳನ್ನು ಜಿಪಂ ಎಂಜಿನಿಯರ್‌ಯೊಬ್ಬರು ರಾತ್ರಿ ವೇಳೆ ಜೇಸಿಬಿಗಳಿಂದ ಕೆಲಸ ಮಾಡಿಸುತ್ತಿರುವ ಬಗ್ಗೆ ಕೂಲಿಕಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಸಿಗದೇ ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಮಹಾತ್ಮಗಾಂಧಿ ಖಾತ್ರಿ ಯೋಜನೆ ಜಾರಿ ಮಾಡಿದ್ದು, ಈ ಯೋಜನೆ ಅನ್ವಯ ಕಾಮಗಾರಿಗಳನ್ನು ನಿಯಮನುಸಾರ ಕೂಲಿಕಾರರಿಂದ ಕೆಲಸ ಮಾಡಿಸಬೇಕು. ಆದರೆ ತ್ವರಿತವಾಗಿ ಕೆಲಸ ಪೂರ್ಣಗೊಳಿಸುವ ಸಲುವಾಗಿ ಇಲ್ಲಿನ ಜಿಪಂ ಸಹಾಯಕ ಎಂಜಿನಿಯರ್ ಪಿರೋಜ್ ಎಂಬುವರು ತಾಲೂಕಿನ ನೆಲಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಯರಪಾಳ್ಯ ಮತ್ತು ಇತರೆ ಗ್ರಾಮಗಳಲ್ಲಿ ಪಂಚಾಯಿತಿ ವತಿಯಿಂದ ಅನುಮೋದನೆಗೊಂಡ ಖಾತ್ರಿ ಯೋಜನೆ ಕಾಮಗಾರಿಗಳನ್ನು ರಾತ್ರಿ ವೇಳೆ ಜೆಸಿಬಿಗಳಿಂದ ಮಾಡಿಸಿ ಕೂಲಿ ಕಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಯಮನುಸಾರ ಖಾತ್ರಿ ಯೋಜನೆಯಲ್ಲಿ ಜೆಸಿಬಿಗಳಿಂದ ಕೆಲಸ ಮಾಡಬಾರದೆಂಬ ಸರ್ಕಾರದ ಆದೇಶವಿದ್ದರೂ ಜೆಸಿಗಳಿಂದ ಕೆಲಸ ನಿರ್ವಹಿಸಿದ್ದಾರೆ. ತನಿಖೆ ಮಾಡಿ ಸೂಕ್ತ ಕ್ರಮ ಜರಿಗಿಸುವ ಮೂಲಕ ಕೂಲಿಕಾರರಿಗೆ ಕೆಲಸ ಕೊಡಿ ಎಂದು ಆನೇಕ ಮಂದಿ ಕೂಲಿಕಾರರು ಮನವಿ ಮಾಡಿದ್ದಾರೆ.