'ಗಂಡು-ಹೆಣ್ಣಿಗೆ ಸಹಚರ ಮನೋಭಾವ ಮುಖ್ಯ'
ತುಮಕೂರು: ಜಗತ್ತಿನ ಯಾವುದೇ ಹೆಣ್ಣು ಮೊದಲು ತನ್ನ ಅನುಚರ ಪ್ರಜ್ಞೆಯಿಂದ ಹೊರ ಬರಬೇಕು ಎಂದು ಲೇಖಕಿ ಶೈಲಾ ನಾಗರಾಜ್ ಅಭಿಪ್ರಾಯಪಟ್ಟರು.
ತುಮಕೂರಿನಲ್ಲಿ ಮಾನವೀಯ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಜಿಲ್ಲಾ ಮಹಿಳಾ ಸಂಘಟನೆ ಸಂಯುಕ್ತವಾಗಿ ಸಾಧಕ ದಂಪತಿಗೆ ಪ್ರತಿ ವರ್ಷ ನೀಡುವ ಸಮಾನತಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಗಂಡು ಕೂಡ ಯಜಮಾನ್ಯ ಪ್ರಜ್ಞೆಯಿಂದ ಹೊರಬರಬೇಕು. ಗಂಡು ಹೆಣ್ಣು ಇಬ್ಬರೂ ಸಹಚರ ಭಾವದಿಂದ ಬದುಕತೊಡಗಿದಾಗ ಲಿಂಗ ತಾರತಮ್ಯ ಹಾಗೂ ಅಸಮಾನತೆ ತೊಲಗಿ ಬದುಕು ಸಮಾನತೆಯ ನೆಲೆಯಲ್ಲಿ ಸೌಖ್ಯ ಕಾಣುತ್ತದೆ ಎಂದರು.
ಸಮಾನತೆಯ ಪ್ರಜ್ಞೆ ಮೇಲು, ಕೀಳಿಲ್ಲದಿರಬೇಕು. ಕುಟುಂಬಗಳಲ್ಲಿ ಪರಸ್ಪರ ಗೌರವ ಇರಬೇಕು ಎಂದು ನುಡಿದರು.
ನಾವು ಪರಸ್ಪರ ಆಡುವ ಮಾತುಗಳು ಪ್ರೀತಿಯ ಭಾಷೆ ಸಂವಾದವಾಗಬೇಕು. ಕರುಣೆ ಮತ್ತು ಅಂತ-ಕರಣ ನಮ್ಮ ಸಾಧನೆಯ ದಾರಿದೀಪ. ಕುಟುಂಬಗಳ ಪ್ರಜಾಪ್ರಭುತ್ವೀಕರಣ ಸಮಾನತೆಯ ಅಡಿಗಲ್ಲು. ಕುಟುಂಬ ಪ್ರಜ್ಞೆ ಮತ್ತು ಕುಟುಂಬ ಪ್ರೀತಿ ಪ್ರತಿ ಕುಟುಂಬದ ಮೂಲ ತತ್ವವಾಗಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಸಾಧಕ ದಂಪತಿಗಳಾದ ಸೌಭಾಗ್ಯ ಸಿದ್ದಪ್ಪ ತಮ್ಮ ಬದುಕಿನ ಅನುಭವ ಹಾಗೂ ಸಮಾಜ ಸೇವೆಯ ಮೂಲಕ ಕಂಡುಕೊಂಡ ನೆಮ್ಮದಿಯನ್ನು ಹಂಚಿಕೊಂಡರು.
ಪ್ರಶಸ್ತಿ ಸಮಿತಿ ಸಂಚಾಲಕಿ ಲಕ್ಷ್ಮಮ್ಮ ದೇವರಾಯಪಟ್ಟಣ ಅವರು ಸನ್ಮಾನ ಪತ್ರ ಓದಿದರು. ಸಂಚಾಲಕಿ ಯಶೋದ ನಂಜುಂಡಯ್ಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಮಹಿಳಾ ಸಂಘಟನೆಯ ಸದಸ್ಯರು ಮಹಿಳಾ ಜಾಗೃತಿ ಗೀತೆ ಹಾಡಿದರು.