ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಯಚಂದ್ರ ಹೇಳಿಕೆ ಸತ್ಯಕ್ಕೆ ದೂರ

Mainashree
Updated On : 3 Jan 2014, 11:34 am

ತುಮಕೂರು: ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿ ಆಧಾರಿತ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ಯೋಜನೆ ಜಾರಿ ಅಸಾಧ್ಯ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಹೇಳಿಕೆ ಸತ್ಯಕ್ಕೆ ದೂರ ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ತಿರುಗೇಟು ನೀಡಿದ್ದಾರೆ.
ಪರಮಶಿವಯ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಟನಲ್ ಮತ್ತು ಫನಲ್ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಇಲ್ಲಿ ತಂತ್ರಜ್ಞಾನ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆಯೇ ಹೊರತು ಯೋಜನೆಯನ್ನೇ ಕೈಬಿಡಲಾಗಿದೆ ಎಂಬ ರೀತಿ ಬಿಂಬಿಸುವುದು ಸರಿಯಲ್ಲ ಎಂದಿದ್ದಾರೆ.
ಎತ್ತಿನಹೊಳೆ ಯೋಜನೆಯನ್ನೂ ಸಹ ಲಿಫ್ಟ್‌ಗೆ ಬದಲಾಗಿ ಟನಲ್ ಮತ್ತು ಫನಲ್ ಯೋಜನೆ ರೂಪಿಸಲು ಇದೇ ಸಮಿತಿ ಸರ್ಕಾರಕ್ಕೆ ವರದಿ ಮಾಡಿದೆ. ಮುಖ್ಯಮಂತ್ರಿಗಳೂ ಸಹ ಎತ್ತಿನಹೊಳೆ ಯೋಜನೆ ಟೆಂಡರ್ ರದ್ದುಗೊಳಿಸಿ ರಿಟೆಂಡರ್ ಮಾಡಲು ಸೂಚಿಸಿದ್ದಾರೆ.
ಜಲಾನಯನ ಪ್ರದೇಶದಲ್ಲಿ ಲಿಫ್ಟ್, ಮಾಲಾಕಾಲುವೆ ಅಥವಾ ಟನಲ್ ಮತ್ತು ಫನಲ್ ಯೋಜನೆ ಯಾವುದಾದರು ರೂಪಿಸಿದರೂ ಅದೆಲ್ಲಾ ಪರಮಶಿವಯ್ಯನವರ ವರದಿಯಲ್ಲಿನ ಅಂಶಗಳೇ ಆಗಿವೆ. ಆದರೆ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ನಲ್ಲಿಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ. ಕೇವಲ 165 ಕಿಮೀ ದೂರದವರೆಗೆ ಎರಡು ಪ್ರತ್ಯೇಕವಾದ ಕಾಲುವೆ ನಿರ್ಮಿಸಿ ಅರಸಿಕೆರೆಯಿಂದ ಒಂದೇ ಕಾಲುವೆ ಅಂದರೆ ವಾಟರ್ ಗ್ರಿಡ್ ಕೆನಾಲ್ ಮೂಲಕ ನೀರು ಹರಿಯಲಿದೆ.  ಪ್ರೊ. ಬಿ.ಆರ್. ಶ್ರೀನಿವಾಸ್ ಮೂರ್ತಿರವರ ಸಲಹೆಯಂತೆ ಹೊಸ ಕಾಲುವೆ ನಿರ್ಮಿಸುವ ಬದಲು ಹಾಲಿ ಇರುವ ಹೇಮಾವತಿ ನಾಲಾ ಕಾಲುವೆಯನ್ನೇ ಆಧುನಿಕರಣಗೊಳಿಸಿ ವಾಟರ್ ಗ್ರಿಡ್ ಕೆನಾಲ್ ಆಗಿ ಪರಿವರ್ತಿಸಲು ಚಿಂತನೆ ನೆಡಸಲಾಗಿದೆ. ಇಷ್ಟೆಲ್ಲಾ ಸಮಾಲೊಚನೆಗಳು ತಾಂತ್ರಿಕ ಸಮಿತಿಯಲ್ಲಿ ಚರ್ಚೆಯಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಬದಲು ಜನತೆಯನ್ನು ದಾರಿ ತಪ್ಪಿಸುವುದು ವಿಷಾದನೀಯ ಎಂದಿದ್ದಾರೆ.
ಸಚಿವ ಜಯಚಂದ್ರ ಅವರು, ಅಭಿವೃದ್ಧಿ ವಿಚಾರದಲ್ಲಿ ಪರಿಣಿತರು. ಆದರೆ ಪರಮಶಿವಯ್ಯನವರ ವರದಿ ಬಗ್ಗೆ ಮಲತಾಯಿ ಧೋರಣೆಯನ್ನು ತೋರುತ್ತಿರುವುದು ಸರಿಯಲ್ಲ. ತಾಂತ್ರಿಕತೆ ಉನ್ನತಿಕರಣವಾದಂತೆ ನಿರ್ಮಾಣದಲ್ಲಿ ಬದಲಾವಣೆ ಮಾಡಿದರೆ ಯೋಜನೆಯನ್ನೇ ಕೈಬಿಡಲಾಗಿದೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement