ಜಿಲ್ಲೆಯ ಭಗೀರಥ ಹೋರಾಟಗಾರ ವೈಕೆಆರ್ವಿಧಿವಶರಾಗಿ 10 ವರ್ಷ
ಕುಣಿಗಲ್: ರಾಜ್ಯ ಕಂಡ ತಾಲೂಕಿನ ಅಪರೂಪದ ರಾಜಕಾರಣಿ, ಮಾಜಿ ಸಚಿವ ದಿ.ವೈ.ಕೆ.ರಾಮಯ್ಯ ದೈವಾಧೀನರಾಗಿ ಹತ್ತು ವರ್ಷ ಕಳೆದಿದೆ. ಅವರು ಕಾಲಾಧೀನರಾದರೂ, ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಹಲವು ಶಾಶ್ವತ ಅಭಿವೃದ್ಧಿ ಕಾಮಗಾರಿ,ಯೋಜನೆಗಳು ಇಂದಿಗೂ ಜನಮನದಲ್ಲಿ ಉಳಿದಿದೆ.
ಜಿಲ್ಲೆಗೆ ಹೇಮಾವತಿ ನೀರು ಹರಿದು ಬರುವಲ್ಲಿ ಭಗೀರಥ ಪ್ರಯತ್ನ ನಡೆಸಿದ ವೈ.ಕೆಆರ್ ಕ್ರಮದಿಂದ ಇಂದು ಜಿಲ್ಲೆ ಸೇರಿದಂತೆ ತಾಲೂಕಿಗೆ ಹೇಮಾವತಿ ಹರಿದುಬಂದಿದೆ. ಹೇಮಾವತಿ ನಾಲಾ ಯೋಜನೆಯಡಿಯಲ್ಲಿ ಪಟ್ಟಣದ ದೊಡ್ಡಕೆರೆಗೆ ಹೇಮಾವತಿ ನೀರನ್ನು ಹರಿಸಲು ಅಂದಿನ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದು, ಹಾಸನದಿಂದ ತಾಲೂಕಿಗೆ ಹೇಮಾವತಿ ಬರದಿದ್ದ ಮೇಲೆ, ತಾಲೂಕು, ಜಿಲ್ಲೆಕಡೆಯಿಂದ ಹಾಸನಕ್ಕೆ ವಾಹನ ಸಂಚಾರ ಬಿಡೊಲ್ಲವೆಂದು ಘೋಷಿಸಿ 1998ರಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಕಲ್ಲುಗಳ ಗೋಡೆ ಕಟ್ಟಿ, ಹಲವು ದಿನಗಳ ವರೆಗೂ ಹೆದ್ದಾರಿಯಲ್ಲೆ ಉಗ್ರ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಜನವರಿ 3, 2004ರಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟ ವೈಕೆಆರ್ ನಿಧನದಿಂದ ತಾಲೂಕಿನ ಪಾಲಿಗೆ ಮಾತ್ರ ತುಂಬಲಾರದ ನಷ್ಟವಾಗಿದೆ. ವೈಕೆಆರ್ ನಿಧನರಾಗಿ ಒಂದು ದಶಕವೇ ಕಳೆದಿದೆ.