ಜಿಲ್ಲೆಯ ವಿಕಲಚೇತನರಿಗೆ ಸಲಕರಣೆ ವಿತರಣಾ ಶಿಬಿರ
ತುಮಕೂರು: ಜಿಲ್ಲೆಯ ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಣಾ ಶಿಬಿರವನ್ನು ಇದೇ ತಿಂಗಳ 19 ರಿಂದ 3 ದಿವಸಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮ ಯಶಸ್ವಿಯನ್ನಾಗಿಸುವ ನಿಟ್ಟಿನಲ್ಲಿ ಸಕಲ ಪೂರ್ವ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಧನೆ ಸಲಕರಣೆ ವಿತರಣಾ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಫಲಾನುಭವಿಗಳ ತಾಲೂಕುವಾರು ಪಟ್ಟಿ ಸಿದ್ದಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಟ್ರೈಸೈಕಲ್ ಮತ್ತು ವೀಲ್ ಚೇರ್ ಗಳಂತಹ ಸಾಧನ ಸಲಕರಣೆಗಳನ್ನು ವಿತರಿಸಲಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವ ಅರ್ಹ ಫಲಾನುಭವಿಗಳು ವಾಸವಿರುವ ಆಯಾ ತಾಲೂಕು ಕೇಂದ್ರಕ್ಕೆ ಸರಬರಾಜು ಮಾಡಲು ವಾಹನ ವ್ಯವಸ್ಥೆ ಕಲ್ಪಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಕಲಚೇತನರ ನಿರ್ವಹಣೆಗಾಗಿ ಎನ್ಎಸ್ಎಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಎನ್ಜಿಒ ಮಹಿಳಾ ಸಂಘಟನೆಗಳ ಸಹಾಯವನ್ನು ಪಡೆಯುವಲ್ಲಿ ಕ್ರಮ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.
ತುಮಕೂರು ಹಾಗೂ ಶಿರಾ ನಗರದಲ್ಲಿನ ಫಲಾನುಭವಿಗಳನ್ನು ಕರೆತರಲು ಖಾಸಗಿ ಶಾಲೆಗಳ ಬಸ್ ಗಳ ವ್ಯವಸ್ಥೆಗಾಗಿ ಕ್ರಮ ವಹಿಸುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಹೊರ ಸ್ಥಳಗಳಿಂದ ಬರುವ ಸ್ವಯಂ ಸೇವಕರಿಗೆ ಹಾಗೂ ಇತರರಿಗೆ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಅವರು, ಕಾರ್ಯಕ್ರಮದ ದಿನದಂದು ಫಲಾನುಭವಿಗಳು ಹಾಗೂ ಇತರೆ ಸಿಬ್ಬಂದಿ ಸ್ವಯಂ ಸೇವಕರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತುಮಕೂರು ಕ್ಯಾಂಪ್ನ ನೋಡಲ್ ಅಧಿಕಾರಿ ಗಾಯತ್ರಿರವರು ಸಭೆಗೆ ಮಾಹಿತಿ ನೀಡುತ್ತಾ, ಮೊದಲ ಎರಡು ದಿನ ತುಮಕೂರಿನಲ್ಲಿ ಶಿಬಿರ ನಡೆಯಲಿದ್ದು, ಮೂರನೇ ದಿನ ಶಿರಾ ತಾಲೂಕಿನಲ್ಲಿ ಸಾಧನ ಸಲಕರಣೆ ವಿತರಣೆ ಶಿಬಿರ ನಡೆಯಲಿದೆ. ಮೊದಲನೇ ದಿನ ತುಮಕೂರು ತಾಲೂಕಿನ ಒಟ್ಟು 626 ಫಲಾನುಭವಿಗಳಿಗೆ ಟ್ರೈಸೈಕಲ್, ವೀಲ್ಚೇರ್, ಎಂಆರ್ ಕಿಟ್, ಸಿಪಿ ಚೇರ್ ವಿತರಿಸಲಾಗುವುದು. ಎರಡನೇ ದಿನ ಕೊರಟಗೆರೆ 97, ಗುಬ್ಬಿ 147, ಕುಣಿಗಲ್ 73, ತಿಪಟೂರು 118, ತುರುವೇಕೆರೆ 104 ಒಟ್ಟು 539 ಫಲಾನುಭವಿಗಳಿಗೆ ಸಾಧನೆ ಸಲಕರಣೆಗಳನ್ನು ವಿತರಿಸಲಾಗುವುದು ಎಂದರು.