ಪದವೀಧರ; ನೋಂದಣಿ ಪ್ರಕ್ರಿಯೆ ಆರಂಭ
ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜ.2ನೇ ವಾರದಿಂದ ಹೊಸದಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಪದವೀಧರರು ನೋಂದಣಿ ಮಾಡಿಸುವಂತೆ ವಿಧಾನಪರಿಷತ್ ಸದಸ್ಯ ಶಿವಯೋಗಿ ಸ್ವಾಮಿ ಮನವಿ ಮಾಡಿದರು.
ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನವೆಂಬರ್ ತಿಂಗಳಿನಲ್ಲಿ ಒಂದು ಸುತ್ತಿನ ನೋಂದಣಿ ಕಾರ್ಯ ಮುಗಿದಿದ್ದು, ಎರಡನೇ ಸುತ್ತಿನ ನೊಂದಣಿ ಕಾರ್ಯ ಆರಂಭವಾಗಿದೆ. ಹೀಗಾಗಿ ಅರ್ಹ ಪದವೀಧರರು ನೋಂದಣಿ ಮಾಡಿಸಲು ಮನವಿ ಮಾಡಿಕೊಂಡರು.
2008 ರ ಪಟ್ಟಿಯಲ್ಲಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 61,626 ಮತದಾರರಿದ್ದು ನವೆಂಬರ್ ಅಂತ್ಯಕ್ಕೆ 25,918 ಹೊಸ ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೊಸದಾಗಿ ನೋಂದಾವಣಿ ಮಾಡಿಸಿಕೊಳ್ಳುವವರು ಕಡ್ಡಾಯವಾಗಿ ಫೋಟೋ ಮತ್ತು ಗುರುತಿನ ಪತ್ರ ತರಬೇಕು ಎಂದು ತಿಳಿಸಿದ್ದಾರೆ. 2008 ಕ್ಕೆ ತುಮಕೂರು ಜಿಲ್ಲೆಯಲ್ಲಿ 19856 ಮತದಾರರಿದ್ದು ನವೆಂಬರ್ 15 ಕ್ಕೆ 5970 ಹೊಸದಾಗಿ ನೋಂದಾವಣಿ ಮಾಡಿಸಿಕೊಂಡಿದ್ದಾರೆ. ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿ 1605 ಮತದಾರರಿದ್ದು ಹೊಸದಾಗಿ 7011 ಮತದಾರರು ಸೇರ್ಪಡೆಯಾಗಿದ್ದಾರೆ.
ಹಾಗೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ 9672 ಮತದಾರರು ಇದ್ದು ಹೊಸದಾಗಿ 5022 ಮತದಾರರು ನೊಂದಾವಣಿ ಮಾಡಿಸಿಕೊಂಡಿದ್ದಾರೆ. ಕೋಲಾರದಲ್ಲಿ 9972 ಮತದಾರರಿದ್ದು ಹೊಸದಾಗಿ 3486 ಮತದಾರರು ಸೇರ್ಪಡೆಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 5821 ಮತದಾರರಿದ್ದು 4429 ಜನ ಹೊಸದಾಗಿ ನೋಂದಾವಣಿ ಮಾಡಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.
ತಾವು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಉದ್ಯಮ ಮೇಳ ಮಾಡಿಸಿದ್ದೆವು. 3278 ಉದ್ಯಮಪತಿಗಳು ಉದ್ಯಮ ಮೇಳಕ್ಕೆ ಬಂದಿದ್ದರು. ಒಟ್ಟು 3 ಲಕ್ಷ 82 ಸಾವಿರ 117 ಮಂದಿ ನಿರುದ್ಯೋಗಿಗಳು ಬಂದಿದ್ದರು. ಇವರಲ್ಲಿ 1 ಲಕ್ಷ 16 ಸಾವಿರದ 98 ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲಾಯಿತು. ಇವರಲ್ಲಿ 97760 ಮಂದಿಯನ್ನು ನೇಮಕ ಮಾಡಿಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.
ತುಮಕೂರು ಜಿಲ್ಲೆಯಲ್ಲಿ 1291 ಉದ್ಯಮಪತಿಗಳು ಬಂದಿದ್ದರು. 127471 ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 30 ಸಾವಿರದ 9 ಮಂದಿಗೆ ನೇಮಕಾತಿ ಸಿಕ್ಕಿತು. 56 ಸಾವಿರ ನಿರುದ್ಯೋಗಿಗಳಿಗೆ ತರಬೇತಿ ನೀಡಿ ಉದ್ಯೋಗ ನೀಡಲಾಯಿತು ಎಂದರು.
ಹೊಸದಾಗಿ ವೃತ್ತಿ ಆರಂಭಿಸಿದ ವಕೀಲರಿಗೆ ರು. 1 ಸಾವಿರ ಪ್ರೋತ್ಸಾಹ ಧನ ನೀಡಲಾಯಿತು. ಈಗ ರು. 2 ಸಾವಿರ ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಮ್ಮ ಸರ್ಕಾರದ ಅವಧಿಯಲ್ಲಿ 1274 ಜೆಓಸಿ ಬೋಧಕ, ಬೋಧಕೇತರ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಲಾಗಿದೆ ಎಂದರು.
ಮುಖಂಡರಾದ ಎಂ.ಬಿ. ನಂದೀಶ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ-ಕೆಜೆಪಿ ಒಂದೇ: ಸೊಗಡು
ತುಮಕೂರು: ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಯಾವುದರ ಮೂಲಕ ಬಿಜೆಪಿ-ಕೆಜೆಪಿ ಒಂದಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯಪಟ್ಟರು. ಹೈಕಮಾಂಡ್ ಮಟ್ಟದಲ್ಲಿ ಕೆಜೆಪಿ-ಬಿಜೆಪಿ ಒಂದಾಗಿರುವುದರಿಂದ ತುಮಕೂರಿನಲ್ಲೂ ಈಗ ಕೆಜೆಪಿ-ಬಿಜೆಪಿ ಒಂದು ಎಂದು ಸೊಗಡು ಶಿವಣ್ಣ ತಿಳಿಸಿದರು.