ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ
ಕೊರಟಗೆರೆ: ಸರ್ಕಾರಿ ನೌಕರರು ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ರಾಜಕಾರಣಿಗಳಿಗಿಂತ ನೌಕರರು ಹೆಚ್ಚು ಕಾಲ ಜನಸೇವೆ ಮಾಡಬಹುದು ಎಂದು ಶಾಸಕ ಪಿ.ಆರ್. ಸುಧಾಕರ್‌ಲಾಲ್ ತಿಳಿಸಿದರು.
ಅವರು ಪಟ್ಟಣದ ತಾಪಂ ಪ್ರಾಂಗಣದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾಭರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಸಮಾಜ ಬದಲಾವಣೆಯಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಾಮುಖ್ಯವಾಗಿದ್ದು ಇದನ್ನು ಅರಿತು ನೌಕರರು ಕೆಲಸ ಮಾಡಬೇಕು ಎಂದರು.
ನೌಕರರ ಸಮಸ್ಯೆಗೆ ಮಾತ್ರ ಅಲ್ಲ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರಕ್ಯಾತರಾಯ ಮಾತನಾಡಿ ನೌಕರರ ಸಂಘ ಕೇವಲ ನೌಕರರ ಸಮಸ್ಯೆಗೆ ಮಾತ್ರ ಅಲ್ಲ. ವಿವಿಧ ಸಾರ್ವಜನಿಕ ಸೇವೆಗಳಾದ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರೆ ಸಾಮಾಜಿಕ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದು ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಪ್ರತಿಯೊಬ್ಬ ಸರ್ಕಾರಿ ನೌಕರನೂ ತಮ್ಮ ವೃತ್ತಿಯನ್ನು ಗೌರವಿಸುವಂತ ಪ್ರವೃತ್ತಿ ಹೆಚ್ಚು ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು. ಬಿಇಒ ಐ.ಎಸ್. ಮಹೇಶ್, ನೌಕರರ ಸಂಘದ ರಾಜ್ಯ ಸದಸ್ಯ ವಿಜಯ್ ಕುಮಾರ್, ಪದಾಧಿಕಾರಿಗಳಾದ ಪಿ.ಸಿ. ನಾರಾಯಣಪ್ಪ, ಗಂಗಮ್ಮ, ಡಾ. ರವಿ, ಎಲ್. ಕಾಮಯ್ಯ, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕ ಸಂಘದ ಪಾಂಡುರಂಗ, ಪ್ರೌಢಶಾಲ ಶಿಕ್ಷಕರ ಸಂಘದ ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಸ್.ಕೆ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.