ಸುದ್ದಿ ಸಂಕ್ಷೇಪ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ
ತುಮಕೂರು: ತುರುವೇಕೆರೆ ತಾಲ್ಲೂಕಿನ ಲೊಕಮ್ಮನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಎನ್. ಮಾವಿನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಸಾಮಾನ್ಯ ವರ್ಗದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಜನವರಿ 20 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ವೈ.ಟಿ.ರಸ್ತೆ, ಗಣಪತಿ ಪೆಂಡಾಲ್ ಪಕ್ಕ, ತುರುವೇಕೆರೆ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಬಸ್ ಪಾಸ್ ಅವಧಿ ವಿಸ್ತರಣೆ
ತುಮಕೂರು: ಕ.ರಾ.ರ.ಸಾ.ನಿಗಮದ ವತಿಯಿಂದ ಅಂಗವಿಲರಿಗೆ ರಿಯಾಯತಿ ದರದಲ್ಲಿ ವಿತರಿಸಲಾದ ಬಸ್ ಪಾಸ್ಗಳ ಅವಧಿಯು ಡಿಸೆಂಬರ್ 31 ಕ್ಕೆ ಮುಕ್ತಾಯಗೊಂಡಿದ್ದು, ಸದರಿ ಅಂಗವಿಕಲರ ರಿಯಾಯತಿ ಬಸ್ ಪಾಸ್ಗಳ ಮಾನ್ಯತೆ ಅವಧಿಯನ್ನು ಫೆಬ್ರವರಿ 28 ರವರೆಗೆ ಚಾಲ್ತಿಯಲ್ಲಿರುವಂತೆ ವಿಸ್ತರಿಸಲಾಗಿದ್ದು, ಬಸ್ ಪಾಸ್ಗಳ ನವೀಕರಣ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧಾ ಕಾರ್ಯಕ್ರಮ
ತುಮಕೂರು: ರಾಜ್ಯ ಶಿಕ್ಷಣ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿ, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಸಂಯುಕ್ತ ಆಶ್ರಯದಲ್ಲಿ ಜನವರಿ 7 ರಂದು ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಉದ್ದಾನೇಶ್ವ ಸಮುದಾಯ ಭವನ ಆವರಣದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಸಿದ್ದಗಂಗಾ ಮಠದ ಅಧ್ಯಕ್ಷ ಶಿವಕುಮಾರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಮತ್ತು ಸಿದ್ದಲಿಂಗ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಶಾಸಕ ಬಿ. ಸುರೇಶ್ ಗೌಡ ಅಧ್ಯಕ್ಷತೆ ವಹಿಸುವರು.
ಹಾವು ಕಚ್ಚಿ
ರೈತ ಸಾವು
ಕೊರಟಗೆರೆ: ತಾಲೂಕಿನ ವೀರಹೋಬಳಹಳ್ಳಿಯ ರೈತ ಶಿವರಾಮಯ್ಯ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಡಿದು ಸಾವನ್ನಪ್ಪಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಹುಸ್ನಾ ಆರಗೆ ಮೊದಲ ರ್ಯಾಂಕ್
ತುಮಕೂರು: ಜನರಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಬೋರ್ಡ್ ಅಫ್ ಇಸ್ಲಾಮಿಕ್ ಎಜುಕೇಷನ್ ಕರ್ನಾಟಕ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪರೀಕ್ಷೆಯಲ್ಲಿ ತುಮಕೂರಿನ ವಿನೋಭನಗರದ ಎ.ಆರ್. ಇಂಗ್ಲಿಷ್ ಸ್ಕೂಲ್ನ ಆಡಳಿತಾಧಿಕಾರಿ ಹುಸ್ನಾ ಆರ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ.
ರಾಜ್ಯದ ಸುಮಾರು 16 ಸಾವಿರ ಜನ ಈ ರಾಜ್ಯಮಟ್ಟದ ಪರೀಕ್ಷೆ ಬರೆದಿದ್ದು, ತುಮಕೂರು ಜಿಲ್ಲೆಯಿಂದ 175 ಜನ ಪರೀಕ್ಷೆ ತೆಗೆದುಕೊಂಡಿದ್ದರು.ಸದರಿ ಪರೀಕ್ಷೆಯಲ್ಲಿ ಮೊದಲ ಮೂರು ರ್ಯಾಂಕುಗಳನ್ನು ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಹಿಂದೂ ಸಮುದಾಯದವರಿಗೆ ವೇದ, ಉಪನಿಷತ್ತು ಪರೀಕ್ಷೆಯ ರೀತಿಯಲ್ಲಿಯೇ ಮುಸ್ಲಿಂ ಜನಾಂಗದವರ ಧಾರ್ಮಿಕ ಆಚರಣೆಗಳಾದ ನಮಾಜ್, ದೀನಾ, ರೋಜಾ ಸೇರಿದಂತೆ ಹಲವು ಧಾರ್ಮಿಕ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಬೋರ್ಡ್ ಅಫ್ ಇಸ್ಲಾಮಿಕ್ ಎಜುಕೇಷನ್ ಈ ಪರೀಕ್ಷೆಯನ್ನು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ನ ತುಮಕೂರು ಜಿಲ್ಲಾ ಸಯೋಜಕ ಇಂತಿಯಾಜ್ ಹಮದ್ ಮೊದಲ ರ್ಯಾಂಕ್ ಪಡೆದ ಹುಸ್ನಾ ಆರ್ ಅವರಿಗೆ ಪ್ರಶಸ್ತಿ ವಿತರಿಸಿದರು.