20ನಿಮಿಷ 20ಸುದ್ದಿ
ಸೊಗಡು ಶಿವಣ್ಣ ವಿರುದ್ಧ ದಲಿತ ಸಂಘಟನೆಗಳ ಕೆಂಗಣ್ಣು
ತುಮಕೂರು: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್. ಲಕ್ಷ್ಮಣ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದಲಿತ ಪರ ಸಂಘಟನೆಗಳ ಒಕ್ಕೂಟ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲಕ್ಷ್ಮಣ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಶಿವಣ್ಣ ಅವರು ಪೂರ್ವಾಗ್ರಹಪೀಡಿತರಾಗಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ದಲಿತ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಆರ್. ಲಕ್ಷ್ಮಣ್ ಅವರು ತುಮಕೂರಿಗೆ ಬಂದಾಗಿನಿಂದ ಹಲವಾರು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ದಕ್ಷತೆ ಮೆರೆದಿದ್ದಾರೆ. ಇದನ್ನು ಸಹಿಸದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗುತ್ತಿರುವ ಮಾಜಿ ಸಚಿವರು ದಕ್ಷ ಅಧಿಕಾರಿಯನ್ನು ಬಲಿ ಕೊಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಯಲ್ಲಣ್ಣಗೆ ಅವರಿಗೆ ಪಿಎಚ್ಡಿ ಪದವಿ
ತುಮಕೂರು: ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕೆ. ಯಲ್ಲಣ್ಣ ಅವರಿಗೆ ಪಿ.ಎಚ್.ಡಿ. ಪದವಿ ಲಭಿಸಿದೆ.
ಹಾವೇರಿ ಜಿಲ್ಲೆಯ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಮೇಲೆ ಯಲ್ಲಣ್ಣ ಕೆ. ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಡಾ. ಎಂ. ಕೊಟ್ರೇಶ್ ಅವರ ಮಾರ್ಗದರ್ಶನದಲ್ಲಿ ಇವರು ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಯಲ್ಲಣ್ಣ ಅವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಅತ್ಯುತ್ತಮ ಶ್ರೇಣಿಯನ್ನು ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕೆ. ಯಲ್ಲಣ್ಣ ಅವರಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ವಿವಿ ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ ತಿಳಿಸಿದ್ದಾರೆ.
ಎಸ್ಮಾ ಬೆದರಿಕೆಗೆ ಸಿಐಟಿಯು ಖಂಡನೆ
ತುಮಕೂರು: ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಅಂಗನವಾಡಿ ನೌಕರರು ತಮ್ಮ ಹಕ್ಕುಗಳಿಗೆ ಹೋರಾಟ ಮಾಡಲು ಹೋಗದಂತೆ ತಡೆಯಲು ಇನ್ನು ವಿಧಾನಪರಿಷತ್ನಲ್ಲಿ ಅಂಗಿಕಾರವನ್ನೆ ಪಡೆಯದ ಎಸ್ಮಾ ಕಾಯ್ದೆಯನ್ನು ಹೇಳಿ ಬೆದರಿಸಲಾಗುತ್ತಿರುವುದು ಸರಿಯಲ್ಲ ಎಂದು ಸಿಐಟಿಯು ಜಿಲ್ಲಾ ಸಮಿತಿ ಖಂಡಿಸಿದೆ. ಸರ್ಕಾರದ ವಿವಿಧ ಯೋಜನೆಗಳ ಜಾರಿಗೆ ಅತೀವ ಶೋಷಣೆಗೆ ಒಳಪಟ್ಟ ಅಂಗನವಾಡಿ ನೌಕರರನ್ನು ಅತ್ಯಂತ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿರುವ ಸರ್ಕಾರ ಕನಿಷ್ಠ ಕೂಲಿಯನ್ನು ನೀಡದೆ ವಂಚಿಸುತ್ತಿದೆ ಎಂದು ಸಿಐಟಿಯು ವಿರೋಧಿಸಿದೆ. 37-38 ವರ್ಷಗಳ ಕಾಲಗಳಿಂದ ದುಡಿಸಿಕೊಳ್ಳುತ್ತಿರುವ ಈ ನೌಕರರು ತಮ್ಮ 66ನೇ ವಯಸ್ಸಿನಲ್ಲಿ ನಿವೃತ್ತರಾಗಿ ಹೋಗುವವರಿಗೆ ಖಾತ್ರಿ ಪಿಂಚಣಿ ಯೋಜನೆಯನ್ನು ರೂಪಿಸದ ಸರ್ಕಾರ ಮಹಿಳೆಯರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲು ಹೊರಟಿದೆ ಎಂದು ಸಿಐಟಿಯು ಆಪಾದಿಸಿದೆ.
ಶರ್ಮಾ ವಿರುದ್ಧ ತನಿಖೆಗೆ ಆಗ್ರಹ
ತುಮಕೂರು: ತುಮಕೂರು ವಿವಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಘನತೆ ಮಾತ್ರವಲ್ಲದೆ ಜಿಲ್ಲೆಯ ಸಾಂಸ್ಕೃತಿಕ ಘನತೆಯನ್ನು ಬೀದಿಪಾಲು ಮಾಡಿರುವ ವಿಶ್ರಾಂತ ಕುಲಪತಿ ಡಾ. ಎಸ್.ಸಿ. ಶರ್ಮಾ ಆಡಳಿತ ಕಾಲದ ಸಮಗ್ರ ತನಿಖೆಗೆ ದಲಿತ ಸಂಶೋಧನಾ ಕೇಂದ್ರದ ನಿರ್ದೇಶಕ ಕೆ.ಬಿ. ಸಿದ್ದಯ್ಯ ಆಗ್ರಹಿಸಿದ್ದಾರೆ. ಎಸ್.ಸಿ. ಶರ್ಮಾ ಅವರ ಆಡಳಿತ ಕಾಲದ ಎಲ್ಲಾ ಬಗೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅತಿಕ್ರಮಗಳು, ಸ್ವಜನ ಪಕ್ಷಪಾತ, ಮೀಸಲಾತಿ ನೇಮಕಾತಿಯಲ್ಲಿ ಒಂದೇ ಜಾತಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ವಿರುದ್ಧ ನಿಲುವಿನ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ. ಜಿಲ್ಲಾ ಮಂತ್ರಿ, ಶಾಸಕ, ಸಂಸದರು ಸರ್ಕಾರದ ಗಮನ ಸೆಳೆಯದೆ ಮೌನ ವಹಿಸಿರುವುದನ್ನು ನೋಡಿದರೆ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ಕಾಲದಲ್ಲಿ ಡಾ. ಎಸ್.ಸಿ. ಶರ್ಮಾರವರು ಕುಲಪತಿಯಾಗಿ ನಡೆಸಿದ ತಪ್ಪುಗಳನ್ನು ಸಮರ್ಥಿಸಿದಂತೆ ಕಾಣುತ್ತದೆ ಎಂದಿದ್ದಾರೆ.
ರಾಜ್ಯಕ್ಕೆ ದಲಿತರನ್ನು ಮುಖ್ಯಮಂತ್ರಿ ಮಾಡಿ
ತುಮಕೂರು: ರಾಜ್ಯಕ್ಕೆ ದಲಿತರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ದಲಿತ ಸ್ವಾಭಿಮಾನಿ ಸಂಘಟನೆಯ ಜಿಲ್ಲಾಧ್ಯಕ್ಷ ಊರ್ಡಿಗೆರೆ ಎಸ್. ಕೆಂಪರಾಜು ಆಗ್ರಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಲಕ್ಷ ಸಹಿ ಸಂಗ್ರಹಕ್ಕೆ ಮುಂದಾಗಿರುವ ಮುಖಂಡರು ಕೂಡಲೇ ಸಹಿ ಸಂಗ್ರಹ ಕೈ ಬಿಡಬೇಕು. ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು ಚುನಾವಣೆ ಎದುರಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗಿನಿಂದ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿಯಾಗುವುದು ಸಂಪ್ರದಾಯ ಎಂದಿದ್ದಾರೆ. ರಾಜ್ಯದಲ್ಲಿ ದಲಿತರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸದ ಕಳಂಕ ಕಾಂಗ್ರೆಸ್ ಪಕ್ಷದ ಮೇಲೆ ಇದೆ. ಹಿಂದಿನ 2008 ಮತ್ತು 2013 ಚುನಾವಣೆಯಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ನೇಮಿಸಿಯೇ ತೀರುತ್ತದೆ ಎಂದು ರಾಜ್ಯ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತದಾನ ಮಾಡಿದ್ದರು ಎಂದಿದ್ದಾರೆ.
ಕೆಎನ್ಆರ್ ವಿರುದ್ಧ ಆಕ್ರೋಶ
ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ವಿರುದ್ಧ ಕೆ.ಎನ್. ರಾಜಣ್ಣ ಅವರು ಪೂರ್ವಾಗ್ರಹ ಪೀಡಿತರಾಗಿ ಹೇಳಿಕೆ ನೀಡಿದ್ದಾರೆ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಬಿ. ಶಾಂತರಾಜು ಆರೋಪಿಸಿದ್ದಾರೆ. ತಮ್ಮ ಇಡೀ ರಾಜಕೀಯ ಜೀವನದಲ್ಲಿ ಕೆ.ಎನ್. ರಾಜಣ್ಣ ಅವರು ಅಹಿಂದ ವಿರೋಧಿ ರಾಜಕಾರಣವನ್ನೇ ಮಾಡುತ್ತಾ ಬಂದಿದ್ದಾರೆ ಎಂದು ಅರೋಪಿಸಿದ್ದಾರೆ. ಈ ಬಾರಿ ಅಹಿಂದ ಓಲೈಕೆಯಿಂದ ಗೆದ್ದು ಬಂದಿರುವ ಕೆ.ಎನ್. ರಾಜಣ್ಣ ಅವರದ್ದು ದಲಿತ ವಿರೋಧಿ ಮನಃಸ್ಥಿತಿ ಎಂದು ಶಾಂತರಾಜು ಜರೆದಿದ್ದಾರೆ. ಪರಮೇಶ್ವರ್ ಅವರಿಗೆ ಸ್ಥಾನ ನೀಡಬೇಕೇ ಅಥವಾ ಬೇಡವೇ ಎಂದು ಹೇಳಲು ಇವರು ಯಾರು ಎಂದಿರುವ ಅವರು ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ನೆಲೆ ಉಳಿಸಿ ಕೆ.ಎನ್. ರಾಜಣ್ಣ ಅಲ್ಲಿ ನೆಲೆ ಮತ್ತು ರಾಜಕೀಯ ಭವಿಷ್ಯ ಕಂಡುಕೊಳ್ಳಲು ಕಾರಣಕರ್ತರಾದ ಪರಮೇಶ್ವರ್ ವಿರುದ್ಧ ಮಾತನಾಡಿರುವುದಕ್ಕೆ ಶಾಂತರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಾಂಗದ ಏಳಿಗೆಗೆ ದುಡಿಯುವೆ: ಶಶಿಕಿರಣ
ತುಮಕೂರು: ತಾವು ನಿರ್ದೇಶಕರಾಗಿ ಆಯ್ಕೆಯಾದರೆ ಒಕ್ಕಲಿಗ ಜನಾಂಗದವರ ಏಳಿಗೆಗೆ ದುಡಿಯುವ ಭರವಸೆಯನ್ನು ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿ ಶಶಿಕಿರಣ್ ನೀಡಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚುನಾವಣೆ ಬಿರುಸಿನಿಂದ ಸಾಗಿದ್ದು ನನ್ನ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಾವು ನಿರ್ದೇಶಕರಾಗಿ ಆಯ್ಕೆಯಾದರೆ ವಿದ್ಯಾರ್ಥಿ ನಿಲಯ, ಕಾಲೇಜು ಸ್ಥಾಪಿಸುವ ಇರಾದೆ ಹೊಂದಿದ್ದೇನೆ. ಅಲ್ಲದೇ ಒಕ್ಕಲಿಗ ಜನಾಂಗದವರ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ತಾವು ಈಗಾಗಲೇ ಜನಾಂಗದ ಪರವಾಗಿ ತಮ್ಮ ಟ್ರಸ್ಟ್ ಮೂಲಕ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ನಿರ್ದೇಶಕರಾಗಿ ಆಯ್ಕೆಯಾದರೆ ಸಮಾಜ ಕಾರ್ಯವನ್ನು ಮತ್ತಷ್ಟು ವಿಸ್ತರಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಜನಾಂಗದ ಬಂಧುಗಳು ತಮ್ಮನ್ನು ಈ ಬಾರಿ ಬೆಂಬಲಿಸುವ ಮೂಲಕ ಮತ್ತಷ್ಟು ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಹೆಂಡದ ಹೊಳೆ: ಆತಂಕಕಾರಿ ಬೆಳವಣಿಗೆ- ನಾಗರಾಜು
ಕೊರಟಗೆರೆ: ಒಕ್ಕಲಿಗ ಸಂಘದ ನಿರ್ದೇಶಕರ ಚುನಾವಣೆ ರಾಜಕಾರಣದಂತಾಗಿದ್ದು ಹೆಂಡ-ಮಾಂಸ-ಹಣದ ಹೊಳೆಯನ್ನು ಹರಿಸುತ್ತಿರುವುದು ಆತಂಕಕಾರಿ ಬೆಳವಣೆಗೆ ಎಂದು ತುಮಕೂರು ಒಕ್ಕಲಿಗರ ಸಂಘದ ನಿರ್ದೇಶಕರ ಅಭ್ಯರ್ಥಿ ಯಲಚವಾಡಿ ನಾಗರಾಜು ಹೇಳಿದರು. ಅವರು ಪಟ್ಟಣದ ಪ್ರೆಸ್ಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಾನು ತುಮಕೂರು ನಿರ್ದೇಶಕರ ಸ್ಥಾನಕ್ಕೆ ಮೂರು ಬಾರಿ ಸ್ಪರ್ಧಿಸಿದ್ದು ಎರಡು ಬಾರಿ ಬಹುಮತದಿಂದ ಆಯ್ಕೆಯಾಗಿದ್ದೇನೆ. ಹಿಂದೆದೂ ಇಂತಹ ಚುನಾವಣೆಯನ್ನು ನಾನು ಕಂಡಿರಲಿಲ್ಲ. ಕುಲಬಾಂಧವರು ಉತ್ತಮವಾದವರನ್ನು ಬೆಂಬಲಿಸಿ ಎಂದು ಸೂಚಿಸಿದರು. ನನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿ ನಿಲಯ, ಬಾಲಕ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಮಾಡಿದ್ದು, ಪ್ರತೀ ತಾಲೂಕಿನಲ್ಲಿ ಸಮುದಾಯ ಭವನ ನಿರ್ಮಿಸುವ ಯೋಜನೆ ಇದ್ದು ಇದು ಸಕಾರವಾಗಲಿದೆ ಎಂದರು.
ಒಂದೇ ಮನೆಯ 3 ಕಾರುಗಳ ಗಾಜು ಒಡೆದ ದುಷ್ಕರ್ಮಿಗಳು
ತುಮಕೂರು: ತುಮಕೂರಿನ ಎಸ್.ಎಸ್. ಪುರಂನಲ್ಲಿ ಒಂದೇ ಮನೆಯ 3 ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳು ಕಲ್ಲು ತೂರಿ ಮೂರು ಪುಡಿಪುಡಿ ಮಾಡಿದ್ದಾರೆ. ಬಸವರಾಜು ಎಂಬುವರಿಗೆ ಸೇರಿದ ಮೂರು ಕಾರುಗಳನ್ನು ಗೇಟ್ ಒಳಗೆ ನಿಲ್ಲಿಸಲಾಗಿತ್ತು. ಕಳೆದ ರಾತ್ರಿ 12 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಗಾಜು ಒಡೆದು ಪರಾರಿಯಾಗಿದ್ದಾರೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ದುಷ್ಕರ್ಮಿಗಳ ಹಿಡಿಯಲು ಬಲ ಬೀಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇದು ನಾಲ್ಕನೆ ಪ್ರಕರಣವಾಗಿದ್ದು ಪೊಲೀಸರಿಗೆ ಇದು ತೆಲೆನೋವಾಗಿ ಪರಿಣಮಿಸಿದೆ.
ತುಮಕೂರು ಮಹಿಳೆ ಶವ ಬಾಗಲೂರು ಬಳಿ ಪತ್ತೆ
ಬೆಂಗಳೂರು: ತುಮಕೂರು ಮೂಲದ ಮಹಿಳೆಯನ್ನು ಕೊಲೆಗೈದು ಶವವನ್ನು ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೂವಿನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಬಿಸಾಡಲಾಗಿದೆ. ತುಮಕೂರಿನಲ್ಲಿ ಸ್ಪಂದನ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ನಡೆಸುತ್ತಿದ್ದ ಗಂಗಾ ಚಂದ್ರಶೇಖರ್ (35) ಎಂಬುವರೇ ಕೊಲೆಯಾದವರು. ಶನಿವಾರ ಬೆಳಗ್ಗೆ ತೋಪಿನಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಗಂಗಾ ಅವರನ್ನು ಬೇರೆಡೆ ಕೊಲೆಗೈದು ಶವವನ್ನು ತಂದು ಬಾಗಲೂರಿನಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾ ಪತಿ ಚಂದ್ರಶೇಖರ್ 7 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರ ಮಗಳು ದಿವ್ಯಾ ಎಂಬಾಕೆ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಒಬ್ಬ ಮಗ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾನೆ. ಕೆಲ ವರ್ಷಗಳಿಂದ ಗಂಗಾ ಹರೀಶ್ ಎಂಬುವರೊಂದಿಗೆ ಸಂಪರ್ಕದಲ್ಲಿದ್ದರು. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ತುಮಕೂರಿನಿಂದ ಪರಿಚಿತ ಹರೀಶ್ನೊಂದಿಗೆ ಗಂಗಾ ಹೊರಗೆ ಹೋಗುವುದನ್ನು ಗಮನಿಸಿರುವುದಾಗಿ ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ.
ಆರತಿ ಪೂಜಾ ಮಹೋತ್ಸವ
ಶಿರಾ ನಗರದ ಶ್ರೀ ಗವಿ ಆಂಜನೇಯ ಸ್ವಾಮಿ ಹಾಗೂ ಶ್ರೀ ದುರ್ಗಮ್ಮದೇವಿ ಪಾದಪದ್ಮಗಳ ಆರತಿ ಪೂಜಾ ಮಹೋತ್ಸವವು ಊರಹಬ್ಬವಾಗಿ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಮಂದಿ ಮಹಿಳೆಯರು ಆರತಿ ಮಾಡುವ ಮೂಲಕ ಭಕ್ತಿ ನಮನ ಸಲ್ಲಿಸಿದರು. ಸಂಸದ ಜನಾರ್ದನ ಸ್ವಾಮಿ ಹಾಗೂ ಶಿಡ್ಲೇಕೋಣದ ಶ್ರೀ ಮಹರ್ಷಿ ವಾಲ್ಮೀಕಿ ಸಂಜಯಕುಮಾರ ಸ್ವಾಮಿಗಳು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
'ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಮುಖ್ಯ'
ಹಾಸನ: ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರವು ಮುಖ್ಯವಾಗಿದೆ ಎಂದು ಮಾಡೆಲ್ ಶಾಲೆಯ ಪ್ರಾಂಶುಪಾಲ ಎಸ್.ಎಂ.ಮಲ್ಲೇಶಪ್ಪ ಅಭಿಪ್ರಾಯಪಟ್ಟರು. ಮಾಡೆಲ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೋಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಜೀವನ ಮಟ್ಟ ಸುಧಾರಣೆಯಾಗುತ್ತದೆ ಮತ್ತು ಸಮಾಜದಲ್ಲಿ ಗೌರವ ಸಂಪಾದಿಸಬಹುದಾಗಿದೆ ಎಂದರು. ಪೋಷಕರು ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿ, ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕೆಂದರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಸಹಕಾರ ಮಖ್ಯವಾಗಿದೆ ಎಂದರು. ಶಿಕ್ಷಕಿಯರಾದ ಶಂಕುತಲಾ, ನೂತನ, ಲಕ್ಷ್ಮೀ ಮಾತನಾಡಿದರು ಸಂಸ್ಥೆಯ ಖಂಜಾಂಚಿ ರೂಪ ವಿನಾಯಕ್, ನಿರ್ದೇಶಕ ಗುರುಮೂರ್ತಿ, ಶಿಕ್ಷಕ ನಿಡಘಟ್ಟ ಗುರುಮೂರ್ತಿ, ಮುಖ್ಯ ಶಿಕ್ಷಕ ಪ್ರಸನ್ನಕುಮಾರ್ ಇದ್ದರು. ಪುರುಷರಿಗೆ ಸ್ಲೋಬೈಕ್ ರೇಸ್, 100 ಮೀ. ಓಟ, 3 ಕಾಲಿನ ಓಟ, ವಾಲಿಬಾಲ್, ಭಾವಗೀತೆ, ಜನಪದ ಗೀತೆ, ಮಹಿಳೆಯರಿಗೆ ಭಾವಗೀತೆ, ಜನಪದ ಗೀತೆ, ತ್ರೋಬಾಲ್, ಮ್ಯೂಸಿಕಲ್ ಚೇರ್, ನಿಂಬೆಹಣ್ಣು ಮತ್ತು ಚಮಚದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಅಂಚೆ ಇಲಾಖೆಯಲ್ಲಿ ಎಂಟಿಎಸ್ಗಳ ನೇಮಕ
ಹಾಸನ: ಕರ್ನಾಟಕ ಅಂಚೆ ವೃತ್ತದಡಿಯಲ್ಲಿ 82 ಬಹುಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟಾಫ್ಗಳನ್ನು ಭರ್ತಿ ಮಾಡಲು ಜ.13 ರೊಳಗೆ ಅಂಚೆ ಮೂಲಕ ಅರ್ಜಿ ಕರೆದಿದ್ದಾರೆ. ಅರ್ಜಿಯನ್ನು ಸ್ಪೀಡ್ ಪೋಸ್ಟ್ ಎಡಿ ರೀತಿಯಲ್ಲೇ ಸಲ್ಲಿಸಬೇಕು. ಅಭ್ಯರ್ಥಿಗಳು, 10ನೇ ತರಗತಿ ಪಾಸಾಗಿದ್ದು, ಜ.13ರಂತೆ 18 ವರ್ಷದಿಂದ 27 ವರ್ಷಗಳೊಳಗಿರಬೇಕು. ನಿಯಮಾನುಸಾರ ವಯೋವುತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕ ರು. 200 ಪರಿಶಿಷ್ಟ ಜಾತಿ, ಪಂಗಡ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯ್ತಿ ಇದೆ. ಆಯ್ಕೆಯು 100 ಅಂಕಗಳ ಬಹು ಆಯ್ಕೆ ವಿಧಾನದ ಪರೀಕ್ಷೆಯ ಮೂಲಕ. ಅವಧಿ 90 ನಿಮಿಷಗಳು. ಭಾಗ- ಎ ಸಾಮಾನ್ಯ ವಿಜ್ಞಾನ, 25 ಪ್ರಶ್ನೆಗಳು, 25 ಅಂಕಗಳು. ಭಾಗ -ಬಿ ಗಣಿತ, 25 ಪ್ರಶ್ನೆಗಳು, 25 ಅಂಕಗಳು. ಭಾಗ -ಸಿ 25 ಅಂಕಗಳ ಇಂಗ್ಲಿಷ್ ಭಾಷಾ ಪರೀಕ್ಷೆ ಮತ್ತು 25 ಅಂಕಗಳ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ.
ಅರ್ಹತೆಯುಳ್ಳ ಆಸಕ್ತ ಯುವಕರು ಹೆಚ್ಚಿನ ವಿವರಕ್ಕಾಗಿ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ ಅನ್ನು ಖುದ್ದಾಗಿ ಅಥವಾ ಮೊ. 9845493336 ಮೂಲಕ ಸಂಪರ್ಕಿಸಿ ಪಡೆಯಬಹುದು. ಕೃಷಿಕ್ ಸರ್ವೋದಯ ಫೌಂಡೇಷನ್ನಲ್ಲಿ ಪರೀಕ್ಷೆಗೆ ಮಾರ್ಗದರ್ಶನ ನೀಡಲಾಗುವುದು.
ಕೈ ಬೀಸಿ ಕರೆಯುತ್ತಿರುವ ಅಪಾಯದ ಬಾವಿ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಯಲಗತವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮೀಪದ ವಸತಿ ಪ್ರದೇಶದಲ್ಲಿ ತೋಡಿರುವ ಕೊಳವೆ ಬಾವಿಯೊಂದರಲ್ಲಿ ನೀರು ಬಾರದ ಕಾರಣಕ್ಕಾಗಿ ಹಾಗೆಯೇ ಬಿಡಲಾಗಿದೆ. ಈ ಪ್ರದೇಶದಲ್ಲಿ ಮಕ್ಕಳು ಆಡುವ ಹಾಗೂ ಓಡಾಡುವ ಕಾಲು ರಸ್ತೆ ಪ್ರದೇಶದಲ್ಲೇ ಇದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈಗಾಗಲೇ ಇಂತಹ ಕೊಳವೆ ಬಾವಿಗಳಲ್ಲಿ ಹಲವು ಮಕ್ಕಳು ಸಿಲುಕಿ ಅಸು ನೀಗಿರುವ ಪ್ರಕರಣಗಳು ಆಗಿ ಹೋಗಿದ್ದರೂ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲೀ, ಚುನಾಯಿತ ಸದಸ್ಯರುಗಳಾಗಲೀ ಇತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ, ಈ ವಿಫಲ ಕೊಳವೆ ಬಾವಿಯನ್ನು ಮುಚ್ಚಿಸುವ ಕೆಲಸ ಮಾಡಬೇಕಿದೆ.
ಶ್ರೀಗಳ ಆರಾಧನಾ ಮಹೋತ್ಸವ
ಹಾಸನ: ನಗರದ ಜವರನಹಳ್ಳಿ ವಿರಕ್ತಮಠದ ತ್ರಿಮೂರ್ತಿ ಗುರುಗಳಾದ ಲಿಂಗೈಕ್ಯ ಶ್ರೀ ದೊಡ್ಡಶಾಂತವೀರ ಶಿವಯೋಗಿ, ಶ್ರೀ ಚಿಕ್ಕಶಾಂತವೀರ ಶಿವಯೋಗಿ ಹಾಗೂ ಶ್ರೀ ಸಂಗಮೇಶ್ವರ ಸ್ವಾಮೀಜಿಯವರ ಆರಾಧನಾ ಮಹೋತ್ಸವವನ್ನು ಜ.6 ರಂದು ಬೆಳಗ್ಗೆ 11ಕ್ಕೆ ನಗರದ ಜವೇನಹಳ್ಳಿ ಮಠದಲ್ಲಿ ಆಯೋಜಿಸಲಾಗಿದೆ. ತಿಪಟೂರಿನ ಷಡಕ್ಷರಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನಿಧ್ಯದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಜವೇನಹಳ್ಳಿ ಮಠಾಧಿಪತಿ ಶ್ರೀ ಸಂಗಮೇಶ್ವರ ದೇವರು ನೇತೃತ್ವ ವಹಿಸುವರು. ಬೆಳಗ್ಗೆ 8 ಗಂಟೆಗೆ ತ್ರಿಮೂರ್ತಿ ಗುರುಗಳ ಗದ್ದುಗೆಗಳಿಗೆ ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ ನಡೆಯಲಿದೆ.