ಉತ್ಪಾದನೆ ಸ್ಥಗಿತಗೊಳಿಸಿದ ಆಡಳಿತ ಮಂಡಳಿ
ಕುಣಿಗಲ್: ತಾಲೂಕಿನ ಅಂಚೇಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿನ ಜಾನ್ಸನ್ ಟೈಲ್ಸ್ ಕಾರ್ಖಾನೆಯಲ್ಲಿ ಆಡಳಿತಮಂಡಳಿ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾ ಹಿನ್ನೆಲೆಯಲ್ಲಿ, ಕಾರ್ಮಿಕರು ಮುಷ್ಕರ ಸಿದ್ಧತೆಗೆ ತೊಡಗಿದ್ದರಿಂದ ಆಡಳಿತ ಮಂಡಳಿ ಉತ್ಪಾದನೆ ಸ್ಥಗಿತಗೊಳಿಸಲು ಮುಂದಾದ ಕಾರಣ ಪರಿಸ್ಥಿತಿ ಗಂಭೀರವಾದ ಘಟನೆ ವರದಿಯಾಗಿದೆ.
ಅಂಚೇಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿನ ಜಾನ್ಸನ್ ಟೈಲ್ಸ್ ಕಾರ್ಖಾನೆಯಲ್ಲಿ 102 ಕಾಯಂ ಕಾರ್ಮಿಕರು, 150 ದಿನಗೂಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಕಾಯಂ ಕಾರ್ಮಿಕರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಸಲ ಮುಷ್ಕರ ನಡೆಸಿ, ಒಟ್ಟಾರೆ ಬೇಡಿಕೆಗಳ ಪೈಕಿ ಕೆಲವೊಂದನ್ನು ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಬಗೆಹರಿಸಲಾಗುತ್ತಿತ್ತು. ಆಡಳಿತಮಂಡಳಿಯ ಧೋರಣೆಗೆ ಬೇಸತ್ತ ಕಾಯಂ ಕಾರ್ಮಿಕರು, ಕಳೆದ ಎಂಟು ದಿನಗಳ ಹಿಂದೆ, ಪ್ರಮುಖ ಬೇಡಿಕೆಗಳಾದ ಸಂಬಳ ಏರಿಕೆ, ದಿನಗೂಲಿ ನೌಕರರನ್ನು ಮುಖ್ಯ ಕೆಲಸಕ್ಕೆ ಬಳಸದಂತೆ, 12ಗಂಟೆ ದುಡಿಸಿಕೊಂಡು ಎಂಟು ಗಂಟೆ ಸಂಬಳ ನೀಡುವುದನ್ನು ಬಿಟ್ಟು ಹೆಚ್ಚುವರಿ ನಾಲ್ಕುಗಂಟೆಗೆ ಹೆಚ್ಚುವರಿ ವೇತನ ನೀಡುವಂತೆ, ದಿನಗೂಲಿ ನೌಕರರ ಪೈಕಿ ಹಲವು ವರ್ಷ ಸೇವೆ ಸಲ್ಲಿಸುವವರನ್ನು ಕಾಯಂಗೊಳಿಸುವುದು ಸೇರಿದಂತೆ ಮತ್ತಿತರೆ ಹಲವು ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸುವ ಸೂಚನೆಯನ್ನು ಆಡಳಿತ ಮಂಡಳಿಗೆ ನೀಡಿದ್ದರು.
ಅದರಂತೆ ಶನಿವಾರ ಬೆಳಗಿನಿಂದ ಶಾಂತರೀತಿಯಲ್ಲೆ ಕಾಯಂ ಕಾರ್ಮಿಕರು ಮುಷ್ಕರದಲ್ಲಿ ತೊಡಗಿದ್ದರು, ಕಾಯಂ ಕಾರ್ಮಿಕರ ಸಹಾಯಕ್ಕೆ ದಿನಗೂಲಿ ನೌಕರರು ಬೆಂಬಲಿಸಿದ ಕಾರಣ ಶನಿವಾರದ ಮೊದಲಪಾಳಿ, ಎರಡನೇ ಪಾಳಿಯ ಉತ್ಪಾದನೆಗೆ ಆಡಚಣೆಯಾದ ಹಿನ್ನೆಲೆಯಲ್ಲಿ, ಆಡಳಿತ ಮಂಡಳಿಯವರು, ಶನಿವಾರ ಕಾರ್ಮಿಕರನ್ನು ಕೆಲಸ ಮಾಡುವಂತೆ ಸೂಚಿಸಿದರೂ, ಕಾರ್ಮಿಕರು ಸ್ಪಂದಿಸದ ಕಾರಣ, ಆಡಳಿತ ಮಂಡಳಿಯವರು ಉತ್ಪಾದನೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ಶನಿವಾರ ಸಂಜೆ ನೀಡಿದ್ದು, ಪರಿಸ್ಥಿತ ಗೊಂದಲಕ್ಕೆ ಕಾರಣವಾಗಿದೆ. ಕಾರ್ಮಿಕರ ಸಂಘದ ಅಧ್ಯಕ್ಷ ತ್ಯಾಗರಾಜ್, ಆಡಳಿತ ಮಂಡಳಿಯವರು ಕಾರ್ಮಿಕರ ಕನಿಷ್ಠ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ನಮ್ಮ ನ್ಯಾಯಯುತ ಬೇಡಿಕೆ ಕೇಳಿದರೆ ಉತ್ಪಾದನೆ ಸ್ಥಗಿತಗೊಳಿಸುವ ಬೆದರಿಕೆ ಹಾಕಿ, ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿ, ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ. ಈ ಮಧ್ಯೆ ಆಡಳಿತ ಮಂಡಳಿಯವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿ ದ್ದು, ಮುಂಜಾಗೃತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.