ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಪಂ ಕಾರ್ಯದರ್ಶಿ ಮೇಲೆ ಹಲ್ಲೆ: ನೌಕರರ ಪ್ರತಿಭಟನೆ

Mainashree
Updated On : 4 Jan 2014, 10:57 am

ಚಿಕ್ಕನಾಯಕನಹಳ್ಳಿ: ತಾಲೂಕಿನ ಕೋರಗೆರೆ ಗ್ರಾಮಪಂಚಾಯ್ತಿ ಕಾರ್ಯದರ್ಶಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಾಲೂಕಿನ ವಿವಿಧ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ತಾಲೂಕು ಪಂಚಾಯ್ತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಹುಳಿಯಾರು ಹೋಬಳಿ  ಕೋರಗೆರೆ ಗ್ರಾಮಪಂಚಾಯ್ತಿಯ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ಮೇಲೆ ಶುಕ್ರವಾರ ಮಧ್ಯಾಹ್ನ ಅದೇ ಗ್ರಾಮಪಂಚಾಯ್ತಿಯಲ್ಲಿ ಈ ಹಿಂದೆ ಬಿಲ್ ಕಲೆಕ್ಟರ್ ಹಾಗೂ ವಾಟರ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ತನ್ನ ಸಂಗಡಿಗರೊಂದಿಗೆ ಕಚೇರಿಗೆ ಬಂದು ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಜಗಳ ತೆಗೆದು ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ  ಗ್ರಾಮಪಂಚಾಯ್ತಿ ನೌಕರರು ಕರ್ತವ್ಯ ನಿರತ ನೌಕರನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ  ತಕ್ಕ ಶಿಕ್ಷೆಯಾಗಬೇಕು ಮತ್ತು ಪಂಚಾಯ್ತಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಭದ್ರತೆ ನೀಡಬೇಕೆಂದು ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಬಹಳ ಕಷ್ಟ: ನಂತರ ಮಾತನಾಡಿದ ನೌಕರರ ಸಂಘದ ಪ್ರತಿನಿಧಿಗಳು ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯ್ತಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಬಹಳ ಕಷ್ಟವಾಗಿದೆ. ಈ ಹಿಂದೆಯೂ  ತಾಲೂಕಿನಲ್ಲಿ ಇಂತಹ ಘಟನೆ ನಡೆದ ಉದಾಹರಣೆಯಿದೆ. ಇಂದು ನಮ್ಮ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದರು. ಹಲ್ಲೆಯನ್ನು ಖಂಡಿಸಿ ದಿನವೀಡಿ ಸರ್ಕಾರದ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು. ಮುಂದೆ ವಿವಾದಾಸ್ಪದ ಕೋರಗೆರೆ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಅಭಿವೃದ್ಧಿ ಅಧಿಕಾರಿಗಳಾಗಲಿ ಮತ್ತು ಕಾರ್ಯದರ್ಶಿಗಲಾಗಲಿ ಕೆಲಸ ನಿರ್ವಹಿಸಕೂಡದು ಎಂದರು. ಪ್ರತಿಭಟನೆಯಲ್ಲಿ ತಾಲೂಕು ಗ್ರಾಮಪಂಚಾಯ್ತಿ ನೌಕರ ಸಂಘದ ಅಧ್ಯಕ್ಷ ಅಡವೀಶ್, ತಾಲೂಕು ನೌಕರ ಸಂಘದ ಖಜಾಂಚಿ ಈರಯ್ಯ ಮುಂತಾದವರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement