ಸರಕಾರಿ ನೌಕರರು ಒಗ್ಗಟ್ಟು ಪ್ರದರ್ಶಿಸಲಿ
ತುಮಕೂರು: ಸರಕಾರಿ ನೌಕರರು ತಮ್ಮಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಮೂಲಕ ಶೋಷಣೆಯಿಂದ ಮುಕ್ತರಾಗುವಂತೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಸಂಘದ ಗೌರವಾಧ್ಯಕ್ಷ ಜಿ.ಎಸ್. ಸಣ್ಣಮುದ್ದಯ್ಯ ತಿಳಿಸಿದ್ದಾರೆ.
ನಗರದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ನೌಕರರಿಗೆ ಸನ್ಮಾನ, ವರ್ಗಾವಣೆಗೊಂಡವರಿಗೆ ಬೀಳ್ಕೊಡುಗೆ ಹಾಗೂ ಸರಕಾರಿ ನೌಕರರ ಸಂಘಕ್ಕೆ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಆರೋಗ್ಯ ಇಲಾಖೆಯ ನೌಕರರಿಗೆ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರಿ ವಾಹನ ಚಾಲಕರ ಸಂಘದಿಂದ ಹೊರತಂದಿರುವ ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಇಂದು ಆರ್.ಟಿ.ಐ ಹೆಸರಿನಲ್ಲಿ ಮನುಷ್ಯ ಮನುಷ್ಯನನ್ನು ಶೋಷಣೆ ಮಾಡುತ್ತಿದ್ದಾನೆ. ಇದು ತಪ್ಪಬೇಕೆಂದರೆ ಮೊದಲು ನಮ್ಮಲ್ಲಿ ಒಗ್ಗಟ್ಟು ಬರಬೇಕು. ಇನ್ನೊಬ್ಬರ ಬೆಳವಣಿಗೆ ಕಂಡು ಅಸೂಯೆ ಪಡುವುದನ್ನು ಬಿಟ್ಟು ಅವರಂತೆ ಬೆಳೆಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಹೊಟ್ಟೆ ಹೊರೆಯುವ ಅಸ್ತ್ರ: ಒಳ್ಳೆಯ ಉದ್ದೇಶದಿಂದ ತಂದ ಆರ್.ಟಿ.ಐ ಎಂಬ ಅಸ್ತ್ರ ಇಂದು ನಿರುದ್ಯೋಗಿಗಳ ಹೊಟ್ಟೆ ಹೊರೆಯುವ ಅಸ್ತ್ರವಾಗಿ ಪರಿಣಮಿಸಿದೆ. ಸ್ವಾತಂತ್ರ್ಯ ಹೋರಾಟಗಾರರಾಗಲಿ, ಬುದ್ಧಿಜೀವಿಗಳಾಗಲಿ, ಪ್ರಗತಿಪರ ಚಿಂತಕರಾಗಲಿ ಇಂದು ಮಾಹಿತಿ ಹಕ್ಕನ್ನು ಬಳಕೆ ಮಾಡುತ್ತಿಲ್ಲ. ಬದಲಿಗೆ ಇನ್ನೊಬ್ಬರನ್ನು ಶೋಷಣೆ ಮಾಡುವುದನ್ನು ವೃತ್ತಿಯಾಗಿಸಿಕೊಂಡಿರುವ ನಿರುದ್ಯೋಗಿಗಳ ಕೈಗೆ ಸಿಕ್ಕು ಕಾಯ್ದೆಯ ಉದ್ದೇಶವೇ ಬುಡಮೇಲಾಗಿದೆ. ಸರಕಾರಿ ನೌಕರರಲ್ಲಿ ಭ್ರಷ್ಟಾಚಾರಿಗಳು ಇಲ್ಲವೆಂದಲ್ಲ. ಶೋಷಣೆಗೆ ಒಳಗಾಗುತ್ತಿರುವವರಲ್ಲಿ ಪ್ರಾಮಾಣಿಕರೇ ಹೆಚ್ಚಾಗಿದ್ದಾರೆ ಎಂದು ಸಣ್ಣಮುದ್ದಯ್ಯ ನುಡಿದರು.
ಸರಕಾರಿ ನೌಕರರ ಸಂಘದಲ್ಲಿ ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯ ನೌಕರರ ಸಂಘಟನೆ ಬೇರೆ ಸಂಘಟನೆಗಳಿಗಿಂತ ಪ್ರಬಲವಾದ ಸಂಘಗಳಾಗಿವೆ. ಈ ಎರಡು ಸಂಘಗಳು ಚುರುಕಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿಯುವುದರಿಂದ ಇತರೆ ಇಲಾಖೆಗಳ ನೌಕರರಿಗೂ ಅನಾಯಾಸವಾಗಿ ಸರಕಾರಿ ಸವಲತ್ತುಗಳು ಲಭ್ಯವಾಗತ್ತಿವೆ. ಸರಕಾರಿ ನೌಕರರ ಸಂಘದ ಭಾರವನ್ನು ಕಡಿಮೆ ಮಾಡಿವೆ. ತಮ್ಮಲ್ಲಿರುವ ಒಡಕುಗಳನ್ನು ಮರೆತು ಒಗ್ಗಟ್ಟು ಪ್ರದರ್ಶಿಸಿದರೆ ಎಂತಹ ಸಮಸ್ಯೆಯನ್ನು ಸುಲಭದಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಸಣ್ಣಮುದ್ದಯ್ಯ ತಿಳಿಸಿದರು.
ಪ್ರಾಮಾಣಿಕ ಯತ್ನ: ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಸಶ್ತ್ರಚಿಕಿತ್ಸಕ ಡಾ.ಶ್ರೀಕಾಂತ ಆರ್.ಬಾಸೂರ್, ತುಮಕೂರು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕನಾಗಿ ಕೆಲಸ ಮಾಡಿದ ಆರು ತಿಂಗಳಲ್ಲಿ ಇರುವ ಕಡಿಮೆ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನನ್ನ ಕೆಲಸಗಳಿಗೆ ಎಲ್ಲಾ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ. ಸರಕಾರಿ ನೌಕರರ ಸಂಘ, ಆರೋಗ್ಯ ಇಲಾಖೆ ನೌಕರರ ಸಂಘ ಜಂಟಿಯಾಗಿ ನನ್ನನ್ನು ಬೀಳ್ಕೊಡುಗೆ ನೀಡುತ್ತಿರುವ ಈ ಕ್ಷಣ ನನ್ನ ಪಾಲಿಗೆ ಅತ್ಯಂತ ಸಂತೋಷದ ಕ್ಷಣ ಎಂದು ಭಾವುಕರಾಗಿ ನುಡಿದರು.
ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಆರ್. ಶ್ರೀನಿವಾಸ್ ಮಾತನಾಡಿ, ರಾಜ್ಯ ಎಲ್ಲಾ ಜಿಲ್ಲೆಗಳಿಗಿಂತ ತುಮಕೂರು ಜಿಲ್ಲಾ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೋರಾಟವಿಲ್ಲದೆ 5 ಮತ್ತು 6 ನೇ ವೇತನ ಆಯೋಗದ ಶಿಫಾರಸುಗಳ ಮೂಲಕ ಸೌಲಭ್ಯ ಪಡೆದಿದ್ದು, ಆರೋಗ್ಯ ಇಲಾಖೆಯ ನೌಕರರ ಪ್ರಮುಖ ಬೇಡಿಕೆಯಾಗಿರುವ ಸಿಬ್ಬಂದಿ ನೇಮಕ ಕುರಿತಂತೆ ಜಿಲ್ಲಾಸ್ಪತ್ರೆಯ ಮುಖ್ಯಸ್ಥರು ಕ್ರಮಕೈಗೊಂಡು ನೌಕರರ ಮೇಲಿರುವ ಒತ್ತಡವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕಳೆದ 35 ವರ್ಷಗಳಿಂದ ಜಿಲ್ಲಾಸ್ಪತ್ರೆಯ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ನಾಗರಾಜು ಮತ್ತು ಹನುಮಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಆರ್. ಶ್ರೀನಿವಾಸ್, ಪುಟ್ಟರಾಜು, ತಿಮ್ಮರಾಜು, ನಾಗರಾಜು, ಕ್ರಿಸ್ಟಿನ್ ಡಿಸೋಜಾ, ಭಾಗ್ಯಲತಾ, ರಂಗನಾಥ್, ರಾಜು ಅವರನ್ನು ಅಭಿನಂದಿಸಲಾಯಿತು. ಪ್ರಭಾರ ಡಿ.ಎಸ್.ಡಾ. ನಾಗೇಂದ್ರಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ರುದ್ರಮೂರ್ತಿ, ಸರಕಾರಿ ನೌಕರರ ರಾಜ್ಯ ಸಂಘದ ಖಜಾಂಚಿ ಚೂಡಾಮಣಿ ಇದ್ದರು.