ಸ್ಲಂ ಜನರಿಗಾಗಿ ಕಾನೂನು ತಿದ್ದುಪಡಿಗೂ ಸರ್ಕಾರ ಬದ್ಧ
ಕ.ಪ್ರ.ವಾರ್ತೆ ತುಮಕೂರು ಜ.4
ಸ್ಲಂ ಜನರ ಹಿತ ಕಾಯುವ ಸಲುವಾಗಿ ಕಾನೂನಿಗೆ ತಿದ್ದುಪಡಿಗೂ ಸರ್ಕಾರ ಬದ್ಧ ಎಂಬ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೀಡಿದರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಸ್ಲಂ ನಿವಾಸಿಗಳ ಸಾಧನ ಸಮಾವೇಶ ಮತ್ತು ಸ್ಲಂ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಆಶ್ರಯ ನಿವೇಶನಗಳನ್ನು ಬಡವರಿಗೆ ವಿತರಿಸಿಲ್ಲ ಬಡವರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು ಚುನಾವಣೆಯಲ್ಲಿ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮನೆ ನೀಡಲು ಬದ್ಧವಾಗಿದೆ ಎಂದರು. ಇದಕ್ಕೆ ಪೂರಕವಾಗಿ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯಾಗಿ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ತಂದಿದ್ದು, ಮುಂದಿನ ದಿನಗಳಲ್ಲಿ ಭೂ ಒಡೆತನ ನೀಡಲು ಟೌನ್ ಕಂಟ್ರಿ ಪ್ಲಾನಿಂಗ್ ಆಕ್ಟ್ಗೆ ತಿದ್ದುಪಡಿ ತಂದು ಸ್ಲಂ ಕಾಯ್ದೆಯನ್ನು ಸ್ಲಂ ಜನರ ಪರವಾಗಿ ರೂಪಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು.
ಜವಾಬ್ದಾರಿ: ಇಡೀ ರಾಜ್ಯವನ್ನು ಗುಡಿಸಲು ಮುಕ್ತ ನಗರಗಳನ್ನಾಗಿ ಮಾಡಲು ರಾಜೀವ್ ಅವಾಜ್ ಯೋಜನೆಯಲ್ಲಿ ಈಗಾಗಲೇ ರಾಜ್ಯದಲ್ಲಿ 10 ನಗರಗಳನ್ನು ಆಯ್ಕೆ ಮಾಡಿದ್ದು 10,752 ಕೋಟಿಗಳ ಅನುಮೋದನೆಯನ್ನು ನೀಡಿದೆ. ಮುಂದಿನ ಹಂತದಲ್ಲಿ 26 ಸಣ್ಣ ನಗರಗಳನ್ನು ಆಯ್ಕೆ ಮಾಡಲಾಗಿದ್ದು ಬಡವರಿಂದ ಆಯ್ಕೆಯಾಗಿರುವ ನಮ್ಮ ಸರ್ಕಾರ ಸ್ಲಂ ಜನರ ಹಿತಾಕಾಯುವುದು ನಮ್ಮ ಜವಾಬ್ದಾರಿ ಎಂದರು. ಸ್ಲಂ ನಲ್ಲಿ ಕನಿಷ್ಠ ಮಟ್ಟದ ಜೀವನ ಕಟ್ಟಿಕೊಳ್ಳುತ್ತಿರುವ ಸ್ಲಂ ನಿವಾಸಿಗಳ ಮಾನವ ಹಕ್ಕು ರಕ್ಷಣೆಯು ಸಮಾಜದ ಮತ್ತು ಸರ್ಕಾರದ ಜವಾಬ್ದಾರಿಯಾಗಬೇಕು. ಸರ್ವರಿಗೂ ಸಮಪಾಲು ಸಮಬಾಳನ್ನು ಸಂವಿಧಾನ ಖಾತ್ರಿ ಮಾಡಿದ್ದು, ಇದನ್ನು ಸಕಾರಗೊಳಿಸಲು ವಯಕ್ತಿಕವಾಗಿ ಮತ್ತು ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಬದ್ಧವಿರುವುದಾಗಿ ತಿಳಿಸಿದ ಅವರು ಸ್ಲಂ ಜನರ ಮತ್ತು ಬಡವರ ಪರವಾಗಿರುವ ಕಾನೂನುಗಳನ್ನು ರೂಪಿಸುವ ಮತ್ತು ತಿದ್ದುಪಡಿ ತರಲು ಮುಂದಾಗುವುದಾಗಿ ಹೇಳಿದರು.
ಕೊಳಗೇರಿ ಜನರಿಗೆ ನನ್ನ ಆದ್ಯತೆ: ಸಾಧನ ಸಮಾವೇಶದ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ತುಮಕೂರು ಶಾಸಕ ಡಾ. ರಫೀಕ್ ಅಹಮದ್ ಅವರು ಸ್ಲಂ ಜನರ ಒಗ್ಗಟ್ಟು ಮತ್ತು ಶಕ್ತಿಯಿಂದಾಗಿ ನಾನು ಶಾಸಕನಾಗಿದ್ದು ಹಲವಾರು ನಗರಪಾಲಿಕೆಯ ಸದಸ್ಯರು ಸ್ಲಂ ಜನರಿಂದ ಆಯ್ಕೆಯಾಗಿರುತ್ತಾರೆ. ಕಳೆದ 7 ವರ್ಷಗಳ ಸ್ಲಂ ಜನರ ಸಂಬಂಧ ಮತ್ತು ಒಡನಾಟದಿಂದ ನಾನು ನೋಡಿರುವುದು ಸ್ಲಂಗಳಲ್ಲಿ ಕನಿಷ್ಠ ಮಟ್ಟದ ಜೀವನ ಕಟ್ಟಿಕೊಳ್ಳುತ್ತಿರುವ ಅಹಿಂದ ಮತ್ತು ಅಲೆಮಾರಿ ಸಮುದಾಯಗಳು ಮಾನವ ಹಕ್ಕುಗಳಿಂದ ಮತ್ತು ನಾಗರಿಕ ಸೌಲಭ್ಯಗಳಿಂದ ವಂಚನೆಗೊಳಗಾಗುತ್ತಿರುವುದನ್ನು ಗಮನಿಸಿದ್ದೇನೆ ಎಂದರು.
ಅವಕಾಶ ಸಿಕ್ಕಿದೆ: ಇಂತಹ ಜನರ ಪರವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಮೊದಲ ಆದ್ಯತೆಯಲ್ಲಿ ಕೊಳಗೇರಿಗಳಲ್ಲಿರುವ ನಿರ್ಗತಿಕ ಕುಟುಂಬಗಳಿಗೆ 1200 ಮನೆಗಳನ್ನು 68 ಕೋಟಿಗಳಲ್ಲಿ ದೊರಕಿಸಿಕೊಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಸ್ಲಂ ನಿವಾಸಿಗಳ ಹಕ್ಕೊತ್ತಾಯ ಮತ್ತು ತುಮಕೂರು ನಗರದ ಸ್ಲಂ ನಿವಾಸಿಗಳ ಸಮಸ್ಯೆಗಳ ಮನವಿಯನ್ನು ಸ್ವಾಗತ ಸಮಿತಿಯ ಎಲ್ಲಾ ಸದಸ್ಯರಾದ ರಾಜಣ್ಣ, ಜಯಣ್ಣ, ಸಿದ್ದಪ್ಪ, ಮುರುಗ, ಗಣೇಶ್, ಸುಬ್ಬ, ಗೌರಮ್ಮ, ಗಂಗಮ್ಮ, ರಘು, ಅರುಣ, ಗಾಯಿತ್ರಿ, ಕೋಮಲ, ಶೃತಿ, ಲತಾ, ಪೃಥ್ವಿ ಮುಂತಾದವರ ನೇತೃತ್ವದಲ್ಲಿ ಉಸ್ತುವಾರಿ ಸಚಿವರು ಮತ್ತು ಶಾಸಕದ್ವಯರಿಗೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್, ನಗರ ಪಾಲಿಕೆ ಮಹಾಪೌರರಾದ ಗೀತಾ ರುದ್ರೇಶ್, ಆಯುಕ್ತರಾದ ಅಶಾದ್ ಶರೀಫ್, ಪಾಲಿಕೆಯ ಸದಸ್ಯರಾದ ಎಂ.ಪಿ. ಮಹೇಶ್, ಸುದೀಶ್ವರ್, ನಯಾಜ್ ಅಹಮದ್, ರವಿಕುಮಾರ್, ಪ್ರೆಸ್ ರಾಜಣ್ಣ, ಚಿಂತಕರಾದ ಕೆ.ದೊರೈರಾಜ್, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಅಲೆಮಾರಿ ಸಮುದಾಯದ ರಾಮಕ್ಕ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ವಹಿಸಿದ್ದರು. ನಿರೂಪಣೆಯನ್ನು ಸೈಯದ್ ಅಲ್ತಾಫ್, ಸ್ವಾಗತವನ್ನು ಶೆಟ್ಟಾಳಯ್ಯ, ವಂದನಾರ್ಪಣೆಯನ್ನು ರಾಮಯ್ಯ ನೆರವೇರಿಸಿದರು. ನಂತರ ತಮಟೆ, ಹರೆ, ಬ್ಯಾಂಡ್ಸೆಟ್, ಗೊಂಬೆ ಕುಣಿತ, ಕಣಿ, ಕೋಲೆ ಬಸವ, ಮತ್ತು ಮಕ್ಕಳ ನೃತ್ಯ ಸಭಿಕರ ಮನಸೂರೆಗೊಂಡಿತು.