ಕುಣಿಗಲ್‌ನಲ್ಲಿ ಬಿರುಸಿನ ಮತದಾನ
ಕುಣಿಗಲ್: ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ತಾಲೂಕಿನ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು.
ಪಟ್ಟಣದಲ್ಲಿ ಒಕ್ಕಲಿಗ ಸಂಘದಾಶ್ರಯದಲ್ಲಿ ನಡೆಯುತ್ತಿರುವ ಜ್ಞಾನಭಾರತಿ ಪ್ರೌಢಶಾಲೆಯ ವಿವಿಧ ಕೊಠಡಿಗಳಲ್ಲಿ 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟಾರೆ 5734 ಮತದಾರರಿದ್ದಾರೆ. ಮತದಾನ ಬೆಳಗಿನಿಂದಲೇ ಬಿರುಸಿನಿಂದ ಪ್ರಾರಂಭಗೊಂಡಿತು. ಮತದಾನ ಕೇಂದ್ರದ ಮುಂಭಾಗದಲ್ಲಿನ ಮುಖ್ಯರಸ್ತೆಯಲ್ಲಿ ವಿವಿಧ ಅಭ್ಯರ್ಥಿಗಳ ಪರ ಬೆಂಬಲಿಗರು ಶಾಮಿಯಾನ ಹಾಕಿಕೊಂಡು ಅಂತಿಮ ಕ್ಷಣ ಮತಯಾಚನೆಯಲ್ಲಿ
ತೊಡಗಿದ್ದರು.
ಜಿಲ್ಲೆಯ ಪೈಕಿ ತಾಲೂಕಿನಲ್ಲೆ ಅತಿಹೆಚ್ಚು ಮತದಾರರನ್ನು ಹೊಂದಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಮತಯಾಚನೆಯಲ್ಲಿ ತೊಡಗಿದ್ದರು. ಶಾಸಕರಾದ ಡಿ.ನಾಗರಾಜಯ್ಯ, ಬಿ. ಸುರೇಶ್ ಗೌಡ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಕಾಂಗ್ರೆಸ್ ಮುಖಂಡ ರವಿಕಿರಣ್, ಅನಸೂಯಮ್ಮ, ತಾಪಂ ಮಾಜಿ ಅಧ್ಯಕ್ಷ ರಾಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಮತಚಲಾವಣೆ ಮಾಡಿದ ಪ್ರಮುಖರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. 5734 ಮತಗಳ ಪೈಕಿ 5063 ಮತ ಚಲಾವಣೆಯಾಗಿ ಒಟ್ಟಾರೆ ಶೇ. 80ರಷ್ಟು ಮತದಾನ ನಡೆದಿದೆ ಮೂಲಗಳು ತಿಳಿಸಿವೆ.