ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರಿನ ಮಣ್ಣಿನಲ್ಲೇ ಹಾಸ್ಯ ಇದೆ

Mainashree
Updated On : 5 Jan 2014, 11:15 am

ಕ.ಪ್ರ.ವಾರ್ತೆ  ತುಮಕೂರು  ಜ.5
ಗುಬ್ಬಿ ವೀರಣ್ಣನಂತಹ ಮಹಾನುಭಾವರು ಹುಟ್ಟಿದ ನೆಲವಿದು. ಕೆ. ಹಿರಣ್ಣಯ್ಯ, ಮಾಸ್ಟರ್ ಹಿರಣ್ಣಯ್ಯ, ಹಾಸ್ಯ ಚಕ್ರವರ್ತಿ  ನರಸಿಂಹರಾಜು ಮುಂತಾದ ದಿಗ್ಗಜರು ಸುಸಂಸ್ಕೃತ ಹಾಸ್ಯವನ್ನು ಬೆಳೆಸಿದ ಹಾಗೂ ಬೇರೆಲ್ಲೂ ಕಾಣದ ಹಾಸ್ಯದ ಸಾಂಸ್ಕೃತಿಕ ವಲಯ ತುಮಕೂರು ಜಿಲ್ಲೆಯಲ್ಲಿದೆ ಎಂದು ನಿವೃತ್ತ ಆರೋಗ್ಯಾಧಿಕಾರಿ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಕೆ. ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರ ವಿದ್ಯಾವಾಹಿನಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 233ನೇ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಷೆಯಲ್ಲಿ ಹಾಸ್ಯ ಎಂಬ ವಿಶೇಷ ಹಾಸ್ಯಸಂಜೆಯಲ್ಲಿ ಮಾತನಾಡಿದರು.
ಇಲ್ಲಿ ನಗೆಮಲ್ಲಿಗೆ, ಹಾಸ್ಯಲೋಕದಂತಹ ಹಾಸ್ಯ ಸಂಸ್ಥೆಗಳಿವೆ. ಹಾಗೂ ನಗೆಮುಗುಳು ಹಾಸ್ಯಪತ್ರಿಕೆ ಇದೆ. ಅಂದರೆ ತುಮಕೂರಿನ ಮಣ್ಣಿನಲ್ಲೇ ಹಾಸ್ಯ ಇದೆ ಎಂದು ಬಣ್ಣಿಸಿದರು.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದವರು ಆಡುವ ವಿಶಿಷ್ಟ ಪದಗಳಲ್ಲಿ ಹಾಸ್ಯವಿದೆ. ನಮ್ಮ ಗಾದೆಗಳಲ್ಲಿ ಹಾಸ್ಯವಿದೆ. ಅಂಗಡಿ, ಕಚೇರಿಗಳಿಗೆ ಬರೆಸಿದ ಬೋರ್ಡ್‌ಗಳಲ್ಲಿ ತಪ್ಪಾದ ಬರವಣಿಗೆಗಳಿಂದ ಹಾಸ್ಯ ಉಂಟಾಗುತ್ತದೆ. ಹಾಸ್ಯ ಎಲ್ಲೆಡೆಯೂ ಇದೆ. ಅದನ್ನು ಕಾಣುವ ದೃಷ್ಟಿ ಬೇಕು. ರವಿ ಕಾಣದ್ದನ್ನು ಕವಿ ಕಾಣುತ್ತಾನೆ, ಕವಿ ಕಾಣದ್ದನ್ನು ಹಾಸ್ಯಗಾರ ಕಾಣುತ್ತಾನೆ. ಹಾಸ್ಯ ಇಂದು ನಮಗೆ ಅನಿವಾರ್ಯವಾಗಿದೆ. ಹಾಸ್ಯಕ್ಕಾಗಿ ಕ್ಲಬ್‌ಗಳು ಹುಟ್ಟಿಕೊಳ್ಳುತ್ತಿವೆ. ನಗದ, ನಗುವಿಲ್ಲದ ಮನುಷ್ಯನು ಮನುಷ್ಯನೇ ಅಲ್ಲ ಎಂದು ಹೇಳಿ ದ.ರಾ.ಬೇಂದ್ರೆಯವರ ಮಾತಿನಲ್ಲಿ ಹಾಸ್ಯ, ಉತ್ತರ ಕರ್ನಾಟಕದವರ ಮಾತಿನಲ್ಲಿನ ಹಾಸ್ಯವನ್ನು ಹೇಳಿ ಸಭಿಕರಲ್ಲಿ ನಗೆ ಚಿಮ್ಮಿಸಿದರು.
ಜಾತಿ ಭೇದವಿಲ್ಲ: ಮಿಮಿಕ್ರಿ ಈಶ್ವರಯ್ಯ ಮಾತನಾಡಿ ನಗುವಿಗೆ ಲಿಂಗ, ಭಾಷೆ, ವಯಸ್ಸು, ಜಾತಿ ಬೇಧವಿಲ್ಲ. ನಾವು ಯಾವಾಗಲೂ ನಗುನಗುತ್ತಿದ್ದರೆ ಹಲವಾರು ಜನ ಸ್ನೇಹಿತರಾಗುತ್ತಾರೆ. ಅಲ್ಲದೆ ನಗುತ್ತಿದ್ದರೆ ಯಾವ ಕಾಯಿಲೆ ಬರುವುದಿಲ್ಲ. ನಾವು ಗಂಟು ಮುಖದವರಾದರೆ ಯಾರೂ ಹತ್ತಿರ ಬರುವುದಿಲ್ಲ ಎಂದರು.
ಪೌರಾಣಿಕ ನಾಟಕಗಳಲ್ಲಿ ಹಾಸ್ಯ ಪ್ರಸಂಗಗಳು, ಹನಿಗವನಗಳಲ್ಲಿ ಹಾಸ್ಯವನ್ನು ಹೇಳಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಬಳಿಕ ನಾಯಿ, ಎಮ್ಮೆ, ಬೆಕ್ಕು, ಮೇಕೆ ಮುಂತಾದ ಪ್ರಾಣಿಗಳ ಧ್ವನಿ ಅನುಕರಣೆಗಳನ್ನು ಮಾಡುವುದರ ಜೊತೆಗೆ ಶಾಡೋ ಪ್ಲೇ ಪ್ರದರ್ಶಿಸುವ ಮೂಲಕ ಸಭಿಕರನ್ನು ರಂಜಿಸಿದರು.
ತಿಪಟೂರಿನ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯನವರು ಸಂಸ್ಕೃತದಲ್ಲಿ ಹಾಸ್ಯವನ್ನು ಕುರಿತು ಮಾತನಾಡಿ ಸಭಿಕರನ್ನು ಮನರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ ಕೆ. ರಾಜಶೇಖರ್ ಅವರು ಹಾಸ್ಯದ ಅವಶ್ಯಕತೆ ಹಾಗೂ ಹಾಸ್ಯದಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳಿದರು.
ಕೆ.ಟಿ. ಸುಶೀಲ ಪ್ರಾರ್ಥಿಸಿದರು. ಈ ಸತ್ಸಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಶಿರಾದ ಲೋಕೇಶ್ ಅಗ್ರಹಾರರವರು ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement