ಮಕ್ಕಳಲ್ಲಿ ಅಡಗಿರುವ ವೈಜ್ಞಾನಿಕ ಗುಣ ಗುರುತಿಸಿ: ರಾಮಕೃಷ್ಣಯ್ಯ
ಕ,ಪ್ರ,ವಾರ್ತೆ ಮಧುಗಿರಿ ಜ.5 ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವೈಜ್ಞಾನಿಕ ಗುಣ ಗುರುತಿಸಿ ಬಾಲ ವಿಜ್ಞಾನಿಗಳನ್ನಾಗಿ ತಯಾರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್. ರಾಮಕೃಷ್ಣಯ್ಯ ಕರೆ ನೀಡಿದರು.
ಪಟ್ಟಣದ ಜೂಪಿಟರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲ ಕಲೆ ಹೊರ ತೆಗೆದುಬೆಳೆಸಬೇಕಾದುದು ಶಿಕ್ಷಕರ ಆದ್ಯ ಕರ್ತವ್ಯ ಎಂದ ಅವರು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದ್ದು ಮಕ್ಕಳು ವೈಜ್ಞಾನಿಕ ಮನೋಭಾವ ಬೆಳಸಿ ಕೊಳ್ಳಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ವೈಜ್ಞಾನಿಕ ಗುಣ ಗುರುತಿಸಿ ಬಾಲ ವಿಜ್ಞಾನಿಗಳನ್ನಾಗಿ ರೂಪಿಸಬೇಕು. ಬೋಧನೆ ಮಾಡುವ ಸಮಯದಲ್ಲಿ (ಟಿಎಲ್‌ಎಂ) ಕಲಿಕಾ ಸಾಮಗ್ರಿ ಬಳಸಿ ಬೋಧನೆ ಮಾಡಿದರೆ ವಿದ್ಯಾರ್ಥಿಗಳ ಮನಸ್ಸಿಗೆ ನಾಟುತ್ತದೆ. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ತಯಾರು ಮಾಡಿ ಎಂದರು.
ಜೂಪಿಟರ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಕೆ. ಜಯರಾಮ್, ಶಿಕ್ಷಕರು ಚಿಕ್ಕ ಮಕ್ಕಳ ಭಾವನೆ ಚಿವುಟದೆ ಅವರ ಪ್ರತಿಭೆ ಹೊರ ತರಲು ಶ್ರಮಿಸಬೇಕು. ನಮ್ಮ ಸಂಸ್ಥೆ ವಿಜ್ಞಾನದ ವಿಚಾರದಲ್ಲಿ ಉತ್ತಮ ಪ್ರಯೋಗಲಯ ಹೊಂದಿದ್ದು ಮಕ್ಕಳಲ್ಲಿ ವಿಜ್ಞಾನದ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಪ್ರದರ್ಶಿಸಿ ಪೋಷಕರ ಗಮನ ಸೆಳೆದರು. ಸಂಸ್ಥಾಪಕ ಕಾರ್ಯದರ್ಶಿ ವಿಮಲಾ ಜಯರಾಮ್, ಆಡಳಿತಾಧಿಕಾರಿ ಶ್ರೀನಾಥ್, ಮುಖ್ಯ ಶಿಕ್ಷಕ ಬಾಲಕೃಷ್ಣ, ಪದ್ಮನಾಚಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್, ಜಿ.ನಾರಾಯಣರಾಜು ಮೊದಲಾದವರು ಉಪಸ್ಥಿತರಿದ್ದರು. ಮಾಮಣಿ ಪ್ರಾಥಿಸಿ ಉಷಾಗಂಗರಾಜು ಸ್ವಾಗತಿಸಿದರು.