ಮಕ್ಕಳಿಗೆ ತಂದೆ-ತಾಯಿ ಪ್ರೀತಿ ವಾತ್ಸಲ್ಯ ಮುಖ್ಯ
ತುರುವೇಕೆರೆ: ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿಸಬೇಕು ಎಂಬ ಭ್ರಮೆಗೆ ಬಿದ್ದು ತಮ್ಮ ಮಕ್ಕಳನ್ನು ತಮ್ಮಿಂದ ದೂರ ಮಾಡಿಕೊಂಡು ಬೇರೆಡೆ ಓದಿಸುವ ಹವ್ಯಾಸ ಜಾಸ್ತಿಯಾಗುತ್ತಿದೆ. ಪರಿಣಾಮವಾಗಿ ಪೋಷಕರಿಂದ ದೂರವಾದ ಮಕ್ಕಳಲ್ಲಿ ಅನಾಥ ಪ್ರಜ್ಞೆ ಕಾಡುತ್ತದೆ ಎಂದು ಸ್ಥಳೀಯ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಹೇಳಿದರು.
ಸಮೀಪದ ದೊಡ್ಡೇನಹಳ್ಳಿಯ ಸೇಂಟ್ ಮೇರಿಸ್ ಶಾಲೆಯ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಚಿಕ್ಕ ವಯಸ್ಸಿನ ಮಕ್ಕಳಿಗೆ ತಮ್ಮ ತಂದೆ ತಾಯಿಯ ಪ್ರೀತಿ ವಾತ್ಸಲ್ಯ ಮುಖ್ಯ. ಮಕ್ಕಳು ಸ್ವಂತ ಬಲದವರೆಗೆ ನಿಲ್ಲುವ ತನಕ ಪೋಷಕರ ಬಳಿಯೇ ಬೆಳೆಯಬೇಕು. ವಿದ್ಯೆಯ ಓಟದಲ್ಲಿ ಎಲ್ಲರನ್ನೂ ಹಿಂದಿಕ್ಕಬೇಕು ಎಂಬ ಆಲೋಚನೆಯಲ್ಲಿ ಇರುವ ಪೋಷರಿಗೆ ತಮ್ಮ ಮಕ್ಕಳಲ್ಲಿ ಅನಾಥ ಭಾವನೆ ಮೂಡಿದೆ, ಅವುಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತವೆ ಎಂಬ ಅರಿವೇ ಇರುವುದಿಲ್ಲ ಎಂದು ವಿಷಾದಿಸಿದರು. ಶಿಕ್ಷಕರೂ ಮಕ್ಕಳಿಗೆ ನೈತಿಕ ಮೌಲ್ಯಗಳ ಬಗ್ಗೆ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.
ಪ್ರಾಂಶುಪಾಲ ಹಾಗೂ ಮುಖ್ಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸೋಮಶೇಖರಯ್ಯನವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಕ್ಕಳೊಂದಿಗೆ ಪೋಷಕರು ನೆಮ್ಮದಿಯಾಗಿ ಟಿವಿ ನೋಡುವ ಕಾಲ ಮುಗಿದು ಹೋಗಿದೆ. ಬಹುತೇಕ ವಾಹಿನಿಗಳಲ್ಲಿ ಅಶ್ಲೀಲ ದೃಶ್ಯಗಳೇ ತುಂಬಿ ಹೋಗಿವೆ. ಇಂತಹ ಕಾರ್ಯಕ್ರಮಗಳನ್ನು ಮಕ್ಕಳ ಮುಂದೆ ಪೋಷಕರು ನೋಡಬಾರದು. ಅದಕ್ಕೆ ಬದಲಾಗಿ ಮಕ್ಕಳ ಮನೋ ವಿಕಾಸವಾಗುವಂತಹ ವೈಜ್ಞಾನಿಕ ಕಾರ್ಯಕ್ರಮಗಳನ್ನು ಮಕ್ಕಳಿಗೆ ತೋರಿಸಬೇಕು ಎಂದು ಸಲಹೆ ನೀಡಿದರು. ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಪೋಷಕರು ಹಾಗೂ ಶಿಕ್ಷಕರು ಈರ್ವರೂ ಮಕ್ಕಳ ಶ್ರೇಯೋಭಿವೃಧ್ಧಿಗೆ ಶ್ರಮಿಸಬೇಕು ಎಂದು ಸೋಮಶೇಖರ್ ಸಲಹೆ ನೀಡಿದರು.
ಕಾಂತರಾಜ್, ಶ್ರೀನಿವಾಸ್, ಸಂಸ್ಥೆಯ ಅಧ್ಯಕ್ಷೆ ಎಸ್.ಕೆ.ಮರಿಯಮ್ಮ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನವಿಲಿನ ಕುಣಿತ, ಸೋಮನ ಕುಣಿತ ಹಾಗೂ ಚಿತ್ರದುರ್ಗದ ಕೋಟೆಯ ದೃಶ್ಯಗಳು ನೋಡುಗರ ಮನ ಸೂರೆಗೊಂಡವು.