ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗಳು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳಲಿ

Mainashree
Updated On : 5 Jan 2014, 11:17 am

ತಿಪಟೂರು: ವಿದ್ಯಾರ್ಥಿ ಜೀವನವೆಂಬುದು ಪವಿತ್ರವಾದದ್ದು, ಈ ಅವಧಿಯಲ್ಲಿ ಶ್ರದ್ಧೆ, ಶಿಸ್ತಿನಿಂದ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂದು ಹಾಸನ ಜಿಲ್ಲೆ ಪುಷ್ಪಗಿರಿಯ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ  ತಿಳಿಸಿದರು.
ಪಟ್ಟಣದ ಎಸ್.ವಿ.ಪಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಎಸ್.ವಿ.ಪಿ. ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಂ. ಬಾಲಿಕಾ ಪ್ರೌಢಶಾಲೆ ಹಾಗೂ ಎಸ್.ವಿ.ಪಿ ಪ್ರಾಥಮಿಕ ಪಾಠಶಾಲೆಗಳ ವಿದ್ಯಾರ್ಥಿ ಸಂಘಗಳ ಸಮಾರೋಪ ಹಾಗೂ ಧನ್ಯರ ಸಂಸ್ಮರಣಾ ಸಮಾರಂಭ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಇಂದಿನ ವಿದ್ಯಾರ್ಥಿಗಳ ಮನಸ್ಸು ಕಾದ ತವೆಯಂತಿರಬೇಕು. ಅದರ ಮೇಲೆ ಜ್ಞಾನವೆಂಬ ಜ್ಯೋತಿಗಳನ್ನು ಹಚ್ಚಿ ಜ್ಞಾನಸಂಪನ್ನರಾಗಿ ಉತ್ತಮ ಸಮಾಜ, ದೇಶ ನಿರ್ಮಿಸುವಂತಹ ಸಂಪತ್ತಾಗಬೇಕು. ಹಣದಿಂದ ಎಲ್ಲವನ್ನು ಕೊಂಡುಕೊಳ್ಳಬಹುದು. ಆದರೆ ಪವಿತ್ರವಾದ ವಿದ್ಯೆಯನ್ನ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅಜ್ಞಾನತೋರುವ ಮಕ್ಕಳನ್ನು ಜ್ಞಾನವೆಂಬ ಬೆಳಕಿನರಮನೆಯ ಕಡೆಗೆ ಕರೆದೊಯ್ಯವ ಗುರುತರ ಹೊಣೆ ಶಿಕ್ಷಕರ ಮತ್ತು ಪೋಷಕರ ಮೇಲೂ ಇದೆ. ಒಟ್ಟಾರೆ ಮಕ್ಕಳು ಸುಸಂಸ್ಕೃತರಾದರೆ ತಂದೆ-ತಾಯಿ, ಕಲಿಸಿದ ಗುರು ಮತ್ತು ದೇಶಕ್ಕೆ ತಕ್ಕ ಆಸ್ತಿಯಾಗುವರೆಂದು ತಿಳಿಸಿದರು.
ಶಿಸ್ತು ಕಲಿಸುತ್ತಿರುವ ಶಾಲೆ: ಹೊಂಬಾಳಿ ಮತ್ತು ಅರುಣೋದಯ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಕೆ. ಷಡಕ್ಷರಿ ಈ ಸಂಸ್ಥೆಯು ಮೊದಲಿನಿಂದಲೂ ಉತ್ತಮ ಶಿಕ್ಷಣ ಮತ್ತು ಶಿಸ್ತನ್ನು ಕಲಿಸುತ್ತಾ ಬಂದಿದ್ದು, ಗ್ರಾಮೀಣ ಭಾಗದ ಮಕ್ಕಳಿಗೂ ಕೂಡ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು. ಈ ಸಮಾರಂಭದ ಜೊತೆಗೆ ಧನ್ಯ ಮಹನೀಯರನ್ನ ಸಂಸ್ಮರಣೆ ಮಾಡುವ ಅರ್ಥಪೂರ್ಣ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದು ಧನ್ಯರ ಗುಣಗಾನ ಮಾಡಿದರು.
ಬಿಇಓ ಪ್ರಭುಸ್ವಾಮಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.  ಶ್ರೀವಿದ್ಯಾಪೀಠದ ಅಧ್ಯಕ್ಷ ಎಸ್.ಕೆ. ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ದೇವರು ಭಕ್ತರ ಸಂಬಂಧದಂತಿರಬೇಕು. ಸಂಬಂಧಗಳು ಹಳಸಿದರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಅದಾಗದಂತೆ ನೋಡಿಕೊಂಡು ಮಕ್ಕಳ ಸದೃಢ ಶಕ್ತಿ ಸಂಪನ್ನರಾಗಿ ಮಾಡಬೇಕೆಂದು ತಿಳಿಸಿದರು.
ಉಪನ್ಯಾಸಕ ಕೆ.ಎನ್. ರೇಣುಕಯ್ಯ ಧನ್ಯ ಮಹನೀಯರಾದ ದಿವಂಗತ ಕೆ.ಪಿ.ರೇವಣಸಿದ್ದಪ್ಪ, ಬಿ.ನಂಜಪ್ಪ, ಬಿ.ಎಂ. ಶಂಕರಪ್ಪನವರನ್ನು ಕುರಿತು ಇವರೆಲ್ಲರೂ ಸಮಾಜ, ಸಾಂಸ್ಕೃತಿಕ, ರಾಷ್ಟ್ರೀಯ ಸಹಕಾರ ಕ್ಷೇತ್ರಗಳಲ್ಲಿ ದುಡಿದ ಶ್ರೇಷ್ಠ ಮಹನೀಯರು ಎಂದರು. ಇವರೆಲ್ಲರ ಸ್ಮರಣೆ ನಮ್ಮ ಯುವ ಪೀಳಿಗೆಗೆ  ಮಾರ್ಗದರ್ಶನವಾಗಬೇಕೆಂದರು.
ಎಸ್.ವಿ.ಪಿ ಶಾಲೆಯ ಹಿರಿಯ ಶಿಕ್ಷಕ ಹಾಲಪ್ಪ, ಕೆ.ಆರ್.ಸಿದ್ದರಾಮಣ್ಣ, ಪರಮೇಶ್ವರಪ್ಪ, ರಮೇಶ್  ಮಾರನಗೆರೆ ನಿರಂಜನಮೂರ್ತಿ ಉಪಸ್ಥಿತರಿದ್ದರು.  ಉಪನ್ಯಾಸಕ ಜಗದೀಶ್ ನಿರೂಪಿಸಿ, ಪ್ರಭಾರಿ ಪ್ರಾಂಶುಪಾಲ ಜಿ.ಕುಮಾರಯ್ಯ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಎಚ್.ಕೆ.ಪದ್ಮಾಕ್ಷಮ್ಮ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement