ಸಮರ್ಥ್ ಸಾಹಿತ್ಯ ಭಂಡಾರ ಸ್ಥಾಪಿಸುವ ಸಂಬಂಧ ಪೂರ್ವಭಾವಿ ಸಭೆ
ತುಮಕೂರು: ತುಮಕೂರಿನ ಸಮರ್ಥ್ ಫೌಂಡೇಷನ್ ಸಮರ್ಥ್ ಸಾಹಿತ್ಯ ಭಂಡಾರ ಸ್ಥಾಪಿಸುವ ಸಂಬಂಧ ತುಮಕೂರಿನ ಸಾಹಿತಿಗಳನ್ನು, ಸಾಹಿತ್ಯಾಸಕ್ತರನ್ನು ಸೇರಿಸಿ ಪೂರ್ವಭಾವಿ ಸಭೆಯನ್ನು ರೆಡ್ ಕ್ರಾಸ್ ಕಟ್ಟಡದಲ್ಲಿ ಸಮರ್ಥ್ ಫೌಂಡೇಷನ್ ನಡೆಸಿತು.
ಸಭೆಯಲ್ಲಿ ವಿಮರ್ಶಕ ಕೆ.ಪಿ. ನಟರಾಜು ಮಾತನಾಡಿ ಫೌಂಡೇಷನ್‌ನ ಕೆಲಸವನ್ನು ಶ್ಲಾಘಿಸುತ್ತಾ ಇದು ವಿಶೇಷ ಪುಸ್ತಕಗಳು ದೊರೆಯುವ ತಾಣವಾಗಬೇಕು. ಎಲ್ಲೂ ದೊರೆಯದ ಪುಸ್ತಕಗಳು ಇಲ್ಲಿ ದೊರೆಯುವಂತಾಗಬೇಕು. ಸಂಶೋಧಕರಿಗೆ ಆಕರಗಳು ದೊರೆಯುವ ತಾಣ ಇದಾಗಬೇಕು ಎಂದರು.
ಸಾಹಿತಿಗಳಾದ ಬಾ.ಹಾ.ರಮಾಕುಮಾರಿ ಮಾತನಾಡುತ್ತಾ ಪ್ರಸ್ತುತ ಎಲ್ಲಾ ಕ್ಷೇತ್ರಗಳು ವ್ಯಾವಹಾರಿಕವಾಗಿರುವಾಗ ಯಾವುದೇ ಲಾಭಗಳಿಕೆಯ ಆಸೆಯಿಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಚಿಂತಿಸುತ್ತಿರುವ ಫೌಂಡೇಷನ್ನಿನ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಇದು ಕೇವಲ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುವ ಬದಲು ಸಾಹಿತ್ಯ ಕ್ಷೇತ್ರದ ವಿವಿಧ ಮಜಲುಗಳಲ್ಲಿ, ಆಯಾಮಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಈ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ನಿಂಗಪ್ಪ, ಎಂಪ್ರೆಸ್ ಪ್ರಾಂಶುಪಾಲ ಬಿ. ಮರುಳಯ್ಯ, ಗಂಗಾಧರ ಕೊಡ್ಲಿ, ಸುಗುಣಾದೇವಿ, ಸಿದ್ದಲಿಂಗಯ್ಯ ಹೊಲತಾಳ್, ಅಕ್ಕಮ್ಮ, ಸದಾಶಿವ್ ಮಂಗಳೂರು, ರಾಜಶೇಖರ್, ಸಿಂಧಿಗಿಕರ್, ಸಮರ್ಥ್ ಫೌಂಡೇಷನ್ ವತಿಯಿಂದ ಎಂ.ಎಚ್. ನಾಗರಾಜು, ಅಶೋಕ್, ರಾಣಿಚಂದ್ರಶೇಖರ್ ಇದ್ದರು.