ಮಡೆಸ್ನಾನಕ್ಕೆ ಪೈಪೋಟಿ: ಭಕ್ತರ ಮೇಲೆ ಪೊಲೀಸರ ಲಘು ಲಾಠಿ ಪ್ರಹಾರ
ಪಾವಗಡ: ತಾಲೂಕಿನ ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಬ್ರಹ್ಮ ರಥೋತ್ಸವದಲ್ಲಿ ಮಡೆಸ್ನಾನ ಮಾಡಲು ನೂಕುನುಗ್ಗಲು ಹೆಚ್ಚಾಗಿ ಗೊಂದಲವೇರ್ಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಲಘು ಲಾಠಿ ಪ್ರಹಾರ ನಡೆಸಿದರು.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಅಧಿಕೃತವಾಗಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಹಾಗೂ ತಹಸೀಲ್ದಾರ್ ಎಂ.ಎಂ. ಪಾಷ ರಥೋತ್ಸವಕ್ಕೆ ಚಾಲನೆ ನೀಡಿದರು. ಆಗಲೇ ಭಕ್ತರು ಮಡೆಸ್ನಾನಕ್ಕಾಗಿ ಕಾಂಪೌಂಡ್ ಸುತ್ತ ಜಮಾಯಿಸಿದ್ದರು. ಬ್ರಾಹ್ಮಣರು ಊಟ ಮಾಡಿದ ನಂತರ ಭಕ್ತರು ಎಲೆ ಮೇಲೆ ಸೇವೆ ಸಲ್ಲಿಸಲು ತೀವ್ರ ಪೈಪೋಟಿ ನಡೆಸಿದರು. ಆಗ ಉಂಟಾದ ಗೊಂದಲವನ್ನು ಪೊಲೀಸರು ಲಘು ಲಾಠಿ ಪ್ರಹಾರದಿಂದ ತಿಳಿಗೊಳಿಸಿದರು. ಈ ಸಂದರ್ಭದಲ್ಲಿ ಅರ್ಚಕ ಬದ್ರಿನಾಥ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜಿಪಂ ಸದಸ್ಯ ಆರ್.ಸಿ ಅಂಜಿನಪ್ಪ, ಹಿರಿಯ ಮುಖಂಡ ಎ. ಶಂಕರರೆಡ್ಡಿ, ಎಸ್.ಕೆ.ರೆಡ್ಡಿ, ವಿ.ಚಿಂತಲರೆಡ್ಡಿ, ತಾಪಂ ಅಧ್ಯಕ್ಷೆ ರಾಧಾರಾಜ್ಗೋಪಾಲ್, ಪುರಸಭೆ ಸದಸ್ಯ ವಸಂತ್ಕುಮಾರ್ ಮುಂತಾದವರು ಇದ್ದರು.