ರೋಟರಿ ಸಂಸ್ಥೆ ಸಮಾಜ ಸೇವಗೆ ಸದಾ ಬದ್ಧ: ನಾಗೇಂದ್ರ
ಮಧುಗಿರಿ: ರೋಟರಿ ಸಂಸ್ಥೆ ಸಮಾಜ ಸೇವಗೆ ಸದಾ ಬದ್ಧವಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಕೆ.ಎಸ್.ನಾಗೇಂದ್ರ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಮಧುಗಿರಿ ಮತ್ತು ರೋಟರಿ ಬೆಂಗಳೂರು ಸೌತ್ ಸಹ ಭಾಗಿತ್ವದಲ್ಲಿ ತಾಲೂಕಿನ 62 ಪ್ರೌಢಶಾಲೆಗಳು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರೈಂಡರ್ ವಿತರಿಸಿ ಮಾತನಾಡಿದರು.
ರೋಟರಿ ಸಂಸ್ಥೆ ತಾಲೂಕಿನ ಎಲ್ಲ ಪ್ರೌಢಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡುಗೆ ತಯಾರು ಮಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಗ್ರೈಂಡರ್ ವಿತರಣೆ ಮೆಚ್ಚುವ ವಿಚಾರ ಎಂದ ಅವರು, ಶಿಕ್ಷಕ ವೃತ್ತಿಯಲ್ಲಿರುವ ಎಂ. ವೆಂಕಟರಾಮು ರೋಟರಿ ಅಧ್ಯಕ್ಷರಾಗಿ ಕಾರ್ಯ ರೂಪಕ್ಕೆ ತಂದಿರುವ ಈ ಯೋಜನೆ ರಾಜ್ಯದಲ್ಲೇ ಪ್ರಥಮ ಎಂದರು.
ರೋಟರಿ ಸಮಾಜದ ಅಗತ್ಯತೆ ಗುರುತಿಸಿ ಸ್ಥಳೀಯ ಸಂಪನ್ಮೂಲ ಕ್ರೋಡೀಕರಿಸಿ ಸಮಾಜಕ್ಕೆ ಬೇಕಾದ ಸೌಲಭ್ಯ ತಲುಪಿಸುವ ಕಾರ್ಯ ಮಾಡುತ್ತಿದ್ದು ಶೈಕ್ಷಣಿಕ ಪ್ರಗತಿಗೆ ಹಲವು ಯೋಜನೆ ಕೈಗೆತ್ತಿಕೊಂಡಿದೆ. ಶಾಲೆಯ ಮುಖ್ಯಸ್ಥರು ರೋಟರಿ ಸಂಪರ್ಕಿಸಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಎಂ.ವೆಂಕಟರಾಮು ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಗ್ರಾಮೀಣ ಭಾಗದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ಉಚಿತವಾಗಿ ವಿತರಿಸುವ ಯೋಜನೆಯಿದೆ ಎಂದರು.
ರೋಟರಿ ಮಾಜಿ ರಾಜ್ಯಪಾಲ ಎಚ್.ಕೆ.ವಿ. ರೆಡ್ಡಿ, ಬೆಂಗಳೂರು ಸೌತ್ ಅಧ್ಯಕ್ಷ ಬಾಲಾಜಿ, ಅಕ್ಷರ ದಾಸೋಹ ಸಹಾಯ ನಿರ್ದೇಶಕ ರಾಜಣ , ರೋಟರಿಯನ್ಗಳಾದ ಡಿ.ಜಿ. ಶಂಕರನಾರಾಯಣಶೆಟ್ಟಿ, ಎಂ. ರಂಗನಾಥಬಾಬು, ವೆಂಕಟೇಶ್ ಮತ್ತು ವಿವಿಧ ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ಅನುಷಾ ಬದ್ರಿನಾಥ್ ಪ್ರಾರ್ಥಿಸಿ ಎಂ. ಶಿವಲಿಂಗಪ್ಪ ಸ್ವಾಗತಿಸಿ ಮಲ್ಲಿಕಾರ್ಜುನ ನಿರೂಪಿಸಿ ರಾಮಚಂದ್ರಪ್ಪ ವಂದಿಸಿದರು.