ಅಧಿಕಾರಿಗಳನ್ನು ಚುರುಕುಗೊಳಿಸಿ
ಕ.ಪ್ರ.ವಾರ್ತೆ , ಕುಣಿಗಲ್ , ಜ.7
ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದೆಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಸೋಮವಾರ, ತಾಲೂಕಿನ ಯಡೆಯೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಈಗಾಗಲೆ ಕೇಂದ್ರ ಸರ್ಕಾರದ ರಾಜೀವಗಾಂಧಿ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಸಾಕಷ್ಟು ಅನುದಾನ ನೀಡಿ, ಅನುದಾನ ವೆಚ್ಚಕ್ಕೆ ಜಿಪಂನಲ್ಲಿ ಅನುಮೋದನೆಯಾಗಿದ್ದರೂ, ಇನ್ನು ಕಾಮಗಾರಿ ಪ್ರಾರಂಭಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ವಿಳಂಬ ನೀತಿ ಕಾರಣವಾಗಿದೆ. ಇವರ ವಿಳಂಬ ನೀತಿಯಿಂದಲೇ ಯೋಜನೆಗಳು ಜನತೆಗೆ ತಲುಪುತ್ತಿಲ್ಲ, ಆದ್ದರಿಂದ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳ, ಸಭೆ ನಡೆಸಿ ಕಾಮಗಾರಿ ಚುರುಕು ಮುಟ್ಟಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಹಾದುಹೋಗಿರುವ ರಾಹೆ 48ರ ಅಭಿವೃದ್ಧಿಗೆ ಕೇಂದ್ರ ರಸ್ತೆನಿಧಿಯಿಂದ 20 ಕೋಟಿ ರು.ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ರಸ್ತೆಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಮಹಾದೇವಪ್ಪ, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಈ ಬ್ಗಗೆ ಸ್ಥಳೀಯ ಲೋಕೋಪಯೋಗಿ ಇಲಾಖಾಧಿಕಾರಿ, ಶಾಸಕರ ಸಂಬಂಧಿಗಳೆಂದು, ಬೇರೆ ರೀತಿಯ ವಿವರವನ್ನು ಶಾಸಕರಿಗೆ ನೀಡಿ, ಶಂಕುಸ್ಥಾಪನೆ ಮಾಡಿಸಿದ್ದಾರೆ. ಆದರೆ, ತಾವು ಶಂಕುಸ್ಥಾಪನೆ ಜಾಯಮಾನಕ್ಕೆ ಸೇರಿದವರಲ್ಲ. ನಾನು ಕೆಲಸ ಮಾಡಿ ತೋರಿಸುವ ಜಾಯಮಾನಕ್ಕೆ ಸೇರಿದವರಾಗಿದ್ದೇನೆ ಎಂದರು.
ಹೇಮಾವತಿ ನಾಲಾವಲಯದ ಅಮೃತೂರು ಹೋಬಳಿಯ ವಿವಿಧೆಡೆಯೆ ಹರಿಜನ, ಗಿರಿಜನ ಕಾಲೋನಿಗಳ ಅಭಿವೃದ್ಧಿಗೆ ಏಳುಕೋಟಿ ರು.ಗಳವಿಶೇಷ ಅನುದಾನ ಮಂಜೂರು ಮಾಡಿಸಿದ್ದು, ಮುಂದಿನ ದಿನಗಳಲ್ಲಿ ಮಾರ್ಕೋನಹಳ್ಳಿ ಜಲಾಶಯಕ್ಕೆ ಹೆಚ್ಚುವರಿ ಹೇಮಾವತಿ ನೀರು ಪೂರೈಸಲು, ನಿಗದಿತ ವೇಳೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನೀರಾವರಿ ಮಂಡಳಿಗೆ ಮನವಿ ಮಾಡಿದ್ದು, ಹುತ್ರಿದುರ್ಗ ಹೋಬಳಿಯ 80 ಕೆರೆಗಳಿಗೆ ನೀರು ಹರಿಸಿ, ನೂರಾರು ಗ್ರಾಮಗಳ ವ್ಯಾಪ್ತಿಯ ಕುಡಿಯುವ ನೀರಿನಸಮಸ್ಯೆ ಬಗೆಹರಿಸುವ ಶ್ರೀರಂಗಂ ಏತನೀರಾವರಿ ಯೋಜನೆಗೆ ತಾಂತ್ರಿಕ ವರದಿ ಸಿದ್ಧವಾಗಿದೆ. ಅನುಮೋದನೆಗೆ ಸಿಎಂ ನೇತೃತ್ವದ ತಾಂತ್ರಿಕ ಸಮಿತಿಯ ಮುಂದೆ ಮಂಡಿಸಲಾಗಿದ್ದು, ಯೋಜನೆ ಅನುಮೋದನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದರು.
ಪಡಿತರ ನೀಡಿ: ಸಂಸದರು ಕೋಡಿಪಾಳ್ಯ, ಸಿದ್ದಾಪುರ ಗ್ರಾಮಗಳ ಭೇಟಿ ಸಮಯದಲ್ಲಿ ಗ್ರಾಮಸ್ಥರು, ಎಪಿಎಲ್ ಕಾರ್ಡ್ಗೆ ಬಿಜೆಪಿ ಸರ್ಕಾರ ಪಡಿತರ ಕೋಡುತ್ತಿದ್ದು, ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ದಯಮಾಡಿ
ಪಡಿತರ ಕೊಡಿಸಲು ಕ್ರಮ ಕೈಗೊಳ್ಳುವಂತೆ, ಸಿಲೆಂಡರ್ ದರ ಮನಬಂದಂತೆ ಏರಿಕೆ ಮಾಡುವುದನ್ನು ನಿಯಂತ್ರಿಸುವಂತೆ ಮನವಿ ಮಾಡಿದರು. ತಹಸೀಲ್ದಾರ್ ಪುಟ್ಟನರಸಯ್ಯ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಮುಖಂಡರಾದ ಅನಸೂಯಮ್ಮ, ಗಿರೀಶ್, ಮಾಗಡಿಪಾಳ್ಯ ಲಕ್ಷ್ಮ್ಣಣ, ದಿನೇಶಗೌಡ, ಪ್ರದೀಪ, ರಂಗಸ್ವಾಮಿಸ, ರಂಗಣ್ಣಗೌಡ ಇತರರು ಉಪಸ್ಥಿತರಿದ್ದು ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಅಹವಾಲಿಗಿಂತ ಆ ಭಾಗದ ಕಾಂಗ್ರೆಸ್ ಮುಖಂಡರು, ವಿವಿಧ ಇಲಾಖಾಧಿಕಾರಿಗಳನ್ನು ಗುರಿಯಾಗಿಸಿ ದೂರು ಹೇಳಿದ್ದು ವಿಶೇಷವಾಗಿತ್ತು.