ಉಚಿತ ಬೈಸಿಕಲ್ ವಿತರಣೆ
ಗುಬ್ಬಿ: ಶೈಕ್ಷಣಿಕ ರಂಗದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಮೂಲಕ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಕಳ್ಳಿಪಾಳ್ಯ ಗ್ರಾಮದ ಶ್ರೀ ನರಸಿಂಹ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಬೈಸಿಕಲ್ ವಿತರಣೆ, ಜಿಲ್ಲಾ ಪಂಚಾಯಿತಿ ವತಿಯ ಕಿರು ನೀರು ಸರಬರಾಜು ಯೋಜನೆ, ಅಡುಗೆಕೋಣೆ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ತಟ್ಟೆ-ಲೋಟ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಡಗೂರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ಉಚಿತ ತಟ್ಟೆ, ಲೋಟ, ಜಮಖಾನ, ಟಿವಿ ಹಾಗೂ ಕ್ಷೀರಭಾಗ್ಯ ಯೋಜನೆಗೆ ಪಾತ್ರೆ ವಿತರಿಸಿರುವುದು ಶ್ಲಾಘನೀಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಬಸವೇಗೌಡ ಮಾತನಾಡಿ ಉತ್ತಮ ಫಲಿತಾಶ ಹಾಗೂ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಅಗತ್ಯವಿದೆ ಎಂದರು.
ಮುಖಂಡ ವೀರೇಶ್ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಕೆ.ಟಿ.ಲೋಕೇಶ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಒಳಗೂಡಿ ಗ್ರಾಮದ ಮುಖಂಡರು, ಗಣ್ಯ ವ್ಯಕ್ತಿಗಳನ್ನು ಅಭಿವೃದ್ಧಿ ಸಮಿತಿ ರಚಿಸಿಕೊಂಡು ನಡೆಸುವಂತೆ ಕರೆ ನೀಡಿದರು.
ಶಾಲೆಯ 27 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಯಿತು.
ತಾಪಂ ಸದಸ್ಯೆ ಪಾರ್ವತಮ್ಮ, ಗ್ರಾಪಂ ಸದಸ್ಯರಾದ ವಿಜಯಲಕ್ಷ್ಮೀ, ರಂಗಪ್ಪ, ವೀರಭದ್ರೇಗೌಡ, ಕೆ.ಎಸ್.ಶಂಕರೇಗೌಡ, ಸತ್ಯನಾರಾಯಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್, ಇಸಿಒ ರಾಮಯ್ಯ, ಮುಖ್ಯ ಶಿಕ್ಷಣ ರಾಜಣ್ಣ, ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಇದ್ದರು.