ಶಿಕ್ಷಕರು ಉತ್ತಮ ಮಾರ್ಗದರ್ಶಕರಾಗಲಿ
ಕ.ಪ್ರ. ವಾರ್ತೆ , ತುಮಕೂರು , ಜ. 7
ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಸರಿತಪ್ಪುಗಳನ್ನು ತಿದ್ದುವಂತಹ, ಮಕ್ಕಳಲ್ಲಿನ ಅಃತಶಕ್ತಿಯನ್ನು ವೃದ್ಧಿಸುವಂತಹ, ಸಮಾಜವನ್ನು ಧೈರ್ಯವಾಗಿ ಎದುರಿಸುವಂತಹ ಮನೋಸ್ಥೈರ್ಯ ಬೆಳೆಸುವಂತಹ ಮಾರ್ಗದರ್ಶಕರಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಕರೆ ನೀಡಿದರು.
ಅವರು ಕರ್ನಾಟಕ ರಾಜ್ಯ ಶಿಕ್ಷಣ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸಿದ್ದಗಂಗಾ ಮಠದ ಸಮುದಾಯಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕರೆ ನೀಡಿದರು. ಶಿಕ್ಷಕರು ಬದುಕಿಗೆ ಹತ್ತಿರವಾದ ನೈತಿಕ ಪಾಠವನ್ನು ಹೇಳಿಕೊಡಬೇಕಾಗುತ್ತದೆ. ಮಕ್ಕಳಿಗೆ ಸಿಗುವಂತಹ ಶಿಕ್ಷಣ ಮಕ್ಕಳಲ್ಲಿ ಪರಿಪಕ್ವತೆಯನ್ನು ತಂದು ಸಮಾಜವನ್ನು ಎದುರಿಸುವಂತಹ ಶಕ್ತಿಯನ್ನು ನೀಡಬೇಕು. ಭವಿಷ್ಯದ ವಿದ್ಯಾರ್ಥಿಗಳನ್ನು ವಿವೇಕಾಯುಕ್ತರನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು. ಆಧುನಿಕತೆಯ ಜೀವನದಲ್ಲಿ ಮನುಷ್ಯನಲ್ಲಿ ಸರಿತಪ್ಪುಗಳ ಅರಿವಿಲ್ಲದ ವಿವೇಕತೆ, ಆತ್ಮವಿಶ್ವಾಸದ ಬರಗಾಲ ಎದ್ದು ತೋರುತ್ತಿದೆ. ಇವೆಲ್ಲವನ್ನೂ ನಾವು ಹೊಡೆದೋಡಿಸಬೇಕು. ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ಸರಿತಪ್ಪುಗಳನ್ನು ಗುರುತಿಸುವಂತಹ ವಿವೇಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಉತ್ತಮ ಬೆಳವಣಿಗೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು ಅವರು ಮಾತನಾಡುತ್ತಾ, ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿರುವುದು ಒಂದು ಉತ್ತಮ ಬೆಳವಣಿಗೆಯಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವಂತಹ ಶಿಕ್ಷಕರು ಸೋಲು ಗೆಲವುಗಳ ಬಗ್ಗೆ ಚಿಂತಿಸದೆ ಕ್ರಿಯಾಶೀಲತೆಯಿಂದ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಸೂಕ್ತ ಗೌರವ ಸಿಗುತ್ತಿಲ್ಲ: ಸಮಾಜದ ಪ್ರತಿ ರಂಗದಲ್ಲಿನ, ಪ್ರತಿ ಕ್ಷೇತ್ರದಲ್ಲಿನ ಆಗುಹೋಗುವ ಘಟನಾವಳಿಗಳಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಸರ್ವರಿಗೂ ಶಿಕ್ಷಣ ನೀಡುವಂತಹ ಪುಣ್ಯಕಾಯಕ ಮಾಡುವಂತಹ ಶಿಕ್ಷಕರಿಗೆ ಸಿಗಬೇಕಾದಂತಹ ಸೂಕ್ತ ಗೌರವ ಸಲ್ಲುತ್ತಿಲ್ಲ ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಶಿಕ್ಷಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲಾ ಆಲೋಚಿಸಬೇಕಿದೆ ಎಂದರು.
ಶಿಕ್ಷಕರು ನಿರಂತರವಾಗಿ ಅಧ್ಯಯನಶೀಲರಾಗಬೇಕು. ನಾಲ್ಕು ಗೋಡೆಗಳ ನಡುವೆ ಕುಳಿತು ಶಿಕ್ಷಣ ನೀಡುವ ಪರಿಪಾಠ ಪರಿಪೂರ್ಣವೆನಿಸುವುದಿಲ್ಲ. ಇತರೆ ಸಹಪಠ್ಯ ಚಟುವಟಿಕೆಗಳು ಸಹ ಬೇಕಾಗುತ್ತದೆ. ತತ್ವಜ್ಞಾನವೊಂದಿದ್ದರೆ ಸಾಲದು, ಜೀವನದ ಆಗುಹೋಗುಗಳಲ್ಲಿ ಶಿಕ್ಷಣ ಕಾರ್ಯರೂಪಕ್ಕೆ ಬರಬೇಕು ಎಂದರು. ಒಟ್ಟಾರೆ ಶಿಕ್ಷಕ ವೃತ್ತಿಯ ಘನತೆ, ಧರ್ಮ, ಮರ್ಯಾದೆ ಕಾಪಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಅತ್ಯವಶ್ಯಕ: ಜಿ.ಪಂ. ಅಧ್ಯಕ್ಷೆ ಸಾಕಮ್ಮ ನಾಗರಾಜ್ ಮಾತನಾಡಿ, ಶಾಲಾ ಪಠ್ಯ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ ಪ್ರವಾಸ, ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆಗಳು ಸಹ ಮಕ್ಕಳಿಗೆ ಅತ್ಯವಶ್ಯಕ ಎಂದು ತಿಳಿಸಿದರು. ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಈಶ್ವರಯ್ಯ, ಎಚ್.ವಿ. ವೆಂಕಟೇಶಪ್ಪ, ಎಚ್.ಎನ್. ಗೋಪಾಲಕೃಷ್ಣ, ಶಿಕ್ಷಣಾಧಿಕಾರಿ ಸಿ. ನಂಜಯ್ಯ, ಮೈದಾಳ ಗ್ರಾ.ಪಂ. ಅಧ್ಯಕ್ಷೆ ನಳಿನಾ, ಶೈಲಜಾ ಕುಮಾರಿ, ಎಚ್.ಆರ್. ರೇಣುಕಯ್ಯ ಸೇರಿದಂತೆ ಇತರೆ ಉಪಸ್ಥಿತರಿದ್ದರು.