ಸವಿತಾ ಸಮಾಜದಿಂದ ಉತ್ತಮ ಕಾರ್ಯ ಸ್ವಾಮೀಜಿ ಶ್ಲಾಘನೆ
ಕ.ಪ್ರ.ವಾರ್ತೆ , ಕುಣಿಗಲ್ , ಜ.7
ಮಂಗಳವಾದ್ಯಗಳಿಗೆ ವೇದಮಂತ್ರಗಳಿರುವಷ್ಟೆ ಪಾವಿತ್ರತೆ ಇದ್ದು, ಮಂಗಳವಾದ್ಯವನ್ನು ನುಡಿಸುವ ಸವಿತಾ ಸಮಾಜದವರು ಸಮಾಜಕ್ಕೆ ಮಂಗಳವನ್ನೇ ಉಂಟು ಮಾಡುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆಂದು ತುಮಕೂರು ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಮಂಗಳವಾರ, ಖಾಸಗಿ ಸಮುದಾಯಭವನದಲ್ಲಿ ತಾಲೂಕು ಸವಿತಾ ಸಮಾಜದ ರಜತ ಮಹೋತ್ಸವ, ಸವಿತಾಮಹರ್ಷಿಗಳ ಜಯಂತ್ಯುತ್ಸವ ಹಾಗೂ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ನಮ್ಮನಾಡಿನ ಪಾರಂಪರಿಕ ಸಂಗೀತವು ಉಳಿದು, ಬೆಳೆಯುವುದಕ್ಕೆ ಸವಿತಾಸಮಾಜದ ಬಾಂಧವರೇ ಕಾರಣವಾಗಿದ್ದಾರೆ ಎಂದರು.
ಸಮಾಜ ಬಾಂಧವರು ಕೇವಲ ಮಂಗಳವಾದ್ಯ ನುಡಿಸಲು ಸೀಮಿತವಾಗದೆ, ಸಂಗೀತಕ್ಷೇತ್ರದಲ್ಲಿ ಮತ್ತಷ್ಟು ಅಭ್ಯಾಸಮಾಡಿ ಕಾಣಿಕೆ ನೀಡಿ. ಆರೋಗ್ಯವಂತ ಸಮಾಜದ ಸ್ವಾಸ್ತ್ಯಕಾಪಾಡುವುದರಲ್ಲೂ ಸವಿತಾಸಮಾಜ ಸದ್ದಿಲ್ಲದೆ ತಮ್ಮ ಮಹತ್ವಪೂರ್ಣಸೇವೆ ನೀಡುತ್ತಿದೆ. ರಾಷ್ಟ್ರವನ್ನಾಳುವವರು ದೇಶದಲ್ಲಿನ ಹಿಂದುಳಿದ ಜನಾಂಗಗಳ ಕಡೆಗಣಿಸಿದರ ಫಲವಾಗಿ, ಭಾರತ ದೇಶವು ಅಭಿವೃದ್ಧಿಯಿಂದ ಹಿಂದುಳಿಯಲು ಕಾರಣವಾಗಿದೆ. ಸಮಾಜದಲ್ಲಿನ ಮೇಲುವರ್ಗ, ಕೀಳುವರ್ಗವೆಂಬುದು ತೊಡೆದು ಎಲ್ಲರೂ ಸರಿಸಮಾನರಾಗಿ ಬಾಳ್ವೆ ನಡೆಸ ಬೇಕೆಂದರೆ, ಎಲ್ಲಾವರ್ಗದವರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ದೇಶದಲ್ಲಿ ಶಿಕ್ಷಣಕ್ರಾಂತಿಯಾದಾಗ ಮಾತ್ರ ದೇಶದಲ್ಲಿನ ಜಾತಿ ಆಧಾರಿತ ವ್ಯವಸ್ಥೆ ನಿರ್ಮೂಲನೆಯಾಗುತ್ತದೆ. ಆದ್ದರಿಂದ ಜನಾಂಗದವರು
ತಮ್ಮ ಮಕ್ಖಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದರು.