ಹಮಾಲರಿಂದ ಪ್ರತಿಭಟನೆ
ಕುಣಿಗಲ್: ಅನ್ನಭಾಗ್ಯ ಯೋಜನೆಯ ಜಾರಿಗೆ ಶ್ರಮಿಸುತ್ತಿರುವ ಹಮಾಲರು ತಮ್ಮ ಬೇಡಿಕೆಗೆ ಆಗ್ರಹಿಸಿ, ಸೋಮವಾರ ಪ್ರತಿಭಟನೆ ನಡೆಸಿದರು.
ಸೋಮವಾರ, ಪಟ್ಟಣದ ಪ್ರಮುಖ ಸಗಟು ಗೋದಾಮು ಇರುವ ಟಿಎಪಿಸಿಎಂಎಸ್ ಕಲ್ಲು ಬಿಲ್ಡಿಂಗ್ ಗೋದಾಮಿನ ಮುಂದೆ, ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದ ಅನ್ನಭಾಗ್ಯ ಯೋಜನೆ ಹಮಾಲರು, ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮುಖಂಡ ವೆಂಕಟೇಶ್, ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಗಟು ಆಹಾರ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಸಾಗಣೆ, ಇಳಿಸುವ, ತುಂಬುವ ಕೆಲಸ ಮಾಡುವ ಹಮಾಲರನ್ನು ಸರ್ಕಾರವು ಕಡೆಗಣಿಸುತ್ತಿದೆ. ಪ್ರಸ್ತುತ ಕ್ವಿಂಟಾಲ್ ಒಂದಕ್ಕೆ ಕೇವಲ 6 ರುಪಾಯಿ ನೀಡುತ್ತಿದ್ದಾರೆ, ಇಎಸೈ, ಪಿಎಫ್ ಸೇರಿದಂತೆ ಯಾವುದೇ ಸವಲತ್ತು ನೀಡುತ್ತಿಲ್ಲ.
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ ಹಮಾಲರಿಗೆ ಮಾತ್ರ ಕೇವಲ ಕ್ವಿಂಟಾಲ್‌ಗೆ 6ರು. ನೀಡುತ್ತಾ ಅವೈಜ್ಞಾನಿಕ ಪದ್ಧತಿ ಅನುಸರಿಸಲಾಗುತ್ತಿದೆ. ರಾಜ್ಯ ಸರ್ಕಾರವೆ ಕ್ವಿಂಟಲ್‌ಗೆ 18 ರು. ನೀಡುವಂತೆ ಈಗಾಗಲೆ ಪ್ರಸ್ತಾವನೆ ಅಂಗೀಕರಿಸಿದ್ದರೂ, ಅದನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಹಮಾಲರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಪ್ರಮುಖರಾದ ನಟರಾಜ್, ಮೆಹಬೂಬ್, ರಮೇಶ, ಕೃಷ್ಣಪ್ಪ, ರಂಗನಾಥ, ಲಕ್ಷ್ಮಣ, ರಾಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
10 ರಂದು ವೈಕುಂಠ ಏಕಾದಶಿ
ಕ.ಪ್ರ. ವಾರ್ತೆ , ತುಮಕೂರು , ಜ. 7
ಕಿರು ತಿರುಪತಿ ಎಂದು ಪ್ರಸಿದ್ಧಿ ಪಡೆದಿರುವ ಪಾವಗಡ ತಾಲೂಕು ಕೃಷ್ಣಾಪುರದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಜನವರಿ 11 ರಂದು ಪರಮಪದ ವೈಕುಂಠ ಏಕಾದಶಿ ಪ್ರಯುಕ್ತ ದೇವರ ವಿಶೇಷ ದರ್ಶನ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 6-30 ರಿಂದ ಪ್ರಾಕಾರೋತ್ಸವ ನಡೆಯಲಿದ್ದು 7-15 ರಿಂದ ಸ್ವರ್ಗದ ದ್ವಾರದಿಂದ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿಯವರ ದರ್ಶನ ಪಡೆಯಬಹುದಾಗಿದೆ.
ದೇವಸ್ಥಾನವು ಪಾವಗಡದಿಂದ 10 ಕಿ.ಮೀ. ದೂರದಲ್ಲಿದ್ದು ಪ್ರತಿ 15 ನಿಮಿಷಕ್ಕೊಂದು ಬಸ್ ಲಭ್ಯವಿದೆ ಎಂದು ದೇವಸ್ಥಾನದ ಗೌರವ ಕಾರ್ಯದರ್ಶಿ ಕೆ.ಕಸ್ತೂರಿ ರಂಗಾಚಾರ್ ತಿಳಿಸಿದ್ದಾರೆ.
ಆಟೋ ದರ ಏರಿಕೆಗೆ ಆಗ್ರಹ: ಪ್ರತಿಭಟನೆ
ಶಿರಾ: ಆಟೋಗ್ಯಾಸ್ ದರ ಏರಿಕೆಯಾಗಿರುವುದರಿಂದ ಆಟೋ ಕನಿಷ್ಠ ದರ ಏರಿಕೆ ಮಾಡಬೇಕು ಎಂದು ಹಾಗೂ ಶಿರಾ ತಾಲೂಕು ಸಾರಿಗೆ ಕೆಲಸ ಕಚೇರಿಯನ್ನು ಮಧುಗಿರಿ ಎ.ಆರ್.ಟಿ.ಓ. ಕಚೇರಿಗೆ ಒಳಪಡಿಸಿರುವುದಕ್ಕೆ ವಿರೋಧಿಸಿ ತಾಲೂಕು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸಿದ್ದೇಶ್ವರ್ ಅವರು ಮಾತನಾಡಿ ಕೇಂದ್ರ ಸರ್ಕಾರವು ಒಂದು ತಿಂಗಳಿಗೆ 3 ಭಾರಿ ಆಟೋಗೆ ಬಳಸುವ ಗ್ಯಾಸ್ ದರ ಏರಿಸಿರುವುದರಿಂದ ಹಾಗೂ ಆಟೋದ ವಿಮೆ, ಆಯಿಲ್, ಬಿಡಿಭಾಗಗಳ ದರ ದುಬಾರಿಯಾಗಿರುವುದರಿಂದ ಆಟೋ ಚಾಲಕ ನಿತ್ಯ ನಷ್ಟವನ್ನು ಅನುಭವಿಸುತ್ತಿದ್ದು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಆದ್ದರಿಂದ ಆಟೋ ಕನಿಷ್ಠ ದರವನ್ನು 30 ರು. ಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಸಾರಿಗೆ ಕೆಲಸ ಕಾರ್ಯಗಳು ಈಗ ತುಮಕೂರು ಸಾರಿಗೆ ಇಲಾಖಾ ಕಚೇರಿಯಲ್ಲಿ ನಡೆಯುತ್ತಿದ್ದು, ಆದರೆ ಬದಲಾದ ಬೆಳವಣಿಗೆಯಲ್ಲಿ ನಮ್ಮ ತಾಲೂಕನ್ನು ಮಧುಗಿರ ಎ.ಆರ್.ಟ.ಓ ಕಚೇರಿಗೆ ವರ್ಗಾಯಿಸಲು ಹುನ್ನಾರ ನಡೆಯುತ್ತಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಆ ಒಂದು ವೇಳೆ ನಮ್ಮ ತಾಲೂಕನ್ನು ಮಧುಗಿರಿ ಎ.ಆರ್.ಟಿ.ಓ. ಕಚೇರಿಗೆ ಬದಲಾಯಿಸಿದರೆ ನಾವುಗಳು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಆಗ್ರಹಿಸಿದರು. ಪ್ರವಾಸಿ ಮಂದಿರದ ಸರ್ಕಲ್‌ನಲ್ಲಿ ಆಟೋಗಳಿಂದ ಸರಪಳಿ ನಿರ್ಮಿಸಿ ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಆಟೋ ಚಾಲಕರ ಸಂಘದ ಅತಾವುಲ್ಲ ಸೇರಿದಂತೆ ನೂರಾರು ಚಾಲಕರು ಹಾಜರಿದ್ದರು.
15 ರಿಂದ 19 ರವರೆಗೆ ಖೋ ಖೋ ಪಂದ್ಯಾವಳಿ
ತುಮಕೂರು: 14 ವರ್ಷದೊಳಗಿನ ಬಾಲಕ-ಬಾಲಕಿಯರ 59 ನೇ ಎಸ್‌ಜಿಪಿಐ 2013-14 ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯನ್ನು ತುಮಕೂರಿನ ವಿಜಯನಗರದಲ್ಲಿರುವ ಸರ್ವೋದಯ ಪ್ರೌಢಶಾಲಾ ಮೈದಾನದಲ್ಲಿ ಜ. 15 ರಿಂದ 19 ರವರೆಗೆ ಹಮ್ಮಿಕೊಳ್ಳಲಾಗಿದೆ. 15 ರಂದು ಸಂಜೆ 4 ಗಂಟೆಗೆ ಪಂದ್ಯಾವಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದಾರೆ. ಯುವಜನ ಸೇವೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರಜೈನ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಡಾ. ಎಸ್. ರಫೀಕ್ ಅಹಮದ್ ವಹಿಸಲಿದ್ದಾರೆ. ಸಾನಿಧ್ಯವನ್ನು ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ನಗರಪಾಲಿಕೆ ಸದಸ್ಯರು, ಮೇಯರ್, ಡಿಸಿ, ಎಸ್ಪಿ, ಸಿಇಓ, ಡಿಡಿಪಿಐ, ಶಿಕ್ಷಣ ಇಲಾಖೆ ಅಧಿಕಾರಿಗಳು ಇತರರು ಪಾಲ್ಗೊಳ್ಳಲ್ಲಿದ್ದಾರೆ.
10 ರಂದು ಬತ್ತದ ಬೆಳೆ ಕ್ಷೇತ್ರೋತ್ಸವ
ತಿಪಟೂರಿನ ಕೃಷಿ ಇಲಾಖೆ ಹಾಗೂ ಕೆವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಹುಣಸೇಘಟ್ಟ ಸಂಯುಕ್ತಾಶ್ರಯದಲ್ಲಿ ಭೂ ಚೇತನ ಯೋಜನೆಯಡಿಯಲ್ಲಿ ತಾಲೂಕು ಮಟ್ಟದ ಬತ್ತದ ಬೆಳೆ ಕ್ಷೇತ್ರೋತ್ಸವ ಹಾಗೂ 8 ನೇ ತರಗತಿ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣಾ ಸಮಾರಂಭವನ್ನು ಹುಣಸೇಘಟ್ಟದ ಕೆವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಿಪಟೂರು ಶಾಸಕ ಕೆ. ಷಡಕ್ಷರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬತ್ತದ ಬೆಳೆ ಕುರಿತು ಕೊನೆಹಳ್ಳಿ ಕೃಷಿ ವಿಜ್‌ಞಾನ ಕೇಂದ್ರದ ವಿಷಯ ತಜ್‌ಞ ಕೆ.ಆರ್. ಶ್ರೀನಿವಾಸ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಿಪಟೂರು ತಾಪಂ ಅಧ್ಯಕ್ಷ ಕೆ.ಎಸ್. ರಾಜು, ಜಿಪಂ ಸದಸ್ಯ ತ್ರಿಯಂಬಕ, ತುಮಕೂರು ಜಂಟಿ ಕೃಷಿ ನಿರ್ದೇಶಕ ಕೆ.ಜಿ. ಅನೂಪ್, ತಿಪಟೂರು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಸ್ಕರ್, ತಾಪಂ ಸದಸ್ಯರಾದ ನೇತ್ರಾವತಿ ದಯಾನಂದ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ದೇವರಾಜ್, ಸದಸ್ಯರಾದ ಎಂ. ಸೋಮಶೇಖರ್, ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಎಚ್. ಎ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ಪ್ರಭುಸ್ವಾಮಿ, ಕೆವಿಎಸ್ ಸಂಸ್ಥೆ ಅಧ್ಯಕ್ಷ ಜಿ.ವಿ. ರಾಜಣ್ಣ, ಕಾರ್ಯದರ್ಶಿ ಪಟೇಲ್ ಶಿವಣ್ಣ ಪಾಲ್ಗೊಳ್ಳಳ್ಲಿದ್ದಾರೆ.
ಸರ್ಕಾರದ ಕಾರ್ಯಕ್ರಮಗಳಿಗೆ ಪ್ರತಿಕ್ರಿಯೆ
ಕುಣಿಗಲ್: ಪಟ್ಟಣದಲ್ಲಿ ನಡೆದ ಸವಿತಾ ಸಮಾಜದ ರಜತ ಮಹೋತ್ಸವ ಸಮಾರಂಭದಲ್ಲಿ ತುಮಕೂರು ರಾಮಕೃಷ್ಣ ಮಠದ ವೀರೇಶಾನಂದಸರಸ್ವತಿ ಸ್ವಾಮೀಜಿ ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರ ಜವಾಬ್ದಾರಿಯಿಂದ ವರ್ತಿಸುವ ಬಗ್ಗೆ ಪ್ರತಿಪಾದಿಸಿದರು.
ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ, ಸರ್ಕಾರವು ಹಿಂದುಳಿದ ಜನಾಂಗವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರನ್ನಾಗಿಸುವ ಅವಶ್ಯಕತೆ ಹೆಚ್ಚಿದೆ.
ಆದರೆ ಅಂತಹ ಪರಿಣಾಮಕಾರಿ ಕಾರ್ಯಕ್ರಮಗಳ ಜಾರಿಗೆ ಕ್ರಮ ಕೈಗೊಳ್ಳದೆ, ಮನೆ ನಿರ್ಮಾಣ, ಸಂಸಾರ ನಿರ್ವಹಣೆ ಸೇರಿದಂತೆ ಪ್ರತಿಯೊಂದಕ್ಕೂ ಯೋಜನೆ ರೂಪಿಸಿ ಜನತೆಯನ್ನು ಪರಾವಲಂಬಿಗಳಾಗಿಸುತ್ತಿದೆ ಎಂದು ವಿಷಾದಿಸಿದರು.
ಕುಣಿಗಲ್: ಪಟ್ಟಣದಲ್ಲಿ ನಡೆದ ಸವಿತಾ ಸಮಾಜದ ರಜತ ಮಹೋತ್ಸವ ಸಮಾರಂಭದಲ್ಲಿ ತುಮಕೂರು ರಾಮಕೃಷ್ಣ ಮಠದ ವೀರೇಶಾನಂದಸರಸ್ವತಿ ಸ್ವಾಮೀಜಿ ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರ ಜವಾಬ್ದಾರಿಯಿಂದ ವರ್ತಿಸುವ ಬಗ್ಗೆ ಪ್ರತಿಪಾದಿಸಿದರು.
ಸರ್ಕಾರದ ಅನ್ನಭಾಗ್ಯ ಯೋಜನೆ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ, ಸರ್ಕಾರವು ಹಿಂದುಳಿದ ಜನಾಂಗವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರನ್ನಾಗಿಸುವ ಅವಶ್ಯಕತೆ ಹೆಚ್ಚಿದೆ.
ಆದರೆ ಅಂತಹ ಪರಿಣಾಮಕಾರಿ ಕಾರ್ಯಕ್ರಮಗಳ ಜಾರಿಗೆ ಕ್ರಮ ಕೈಗೊಳ್ಳದೆ, ಮನೆ ನಿರ್ಮಾಣ, ಸಂಸಾರ ನಿರ್ವಹಣೆ ಸೇರಿದಂತೆ ಪ್ರತಿಯೊಂದಕ್ಕೂ ಯೋಜನೆ ರೂಪಿಸಿ ಜನತೆಯನ್ನು ಪರಾವಲಂಬಿಗಳಾಗಿಸುತ್ತಿದೆ ಎಂದು ವಿಷಾದಿಸಿದರು.
ನಾಳೆ, ನಾಡಿದ್ದು ಯುವ ಕಾಂಗ್ರೆಸ್ ಚುನಾವಣೆ
ತುಮಕೂರು: 2014-15 ನೇ ಸಾಲಿನ ಯುವ ಕಾಂಗ್ರೆಸ್ ಚುನಾವಣೆಗೆ ಜ.9 ಮತ್ತು 10 ರಂದು ಚುನಾವಣೆ ನಡೆಯಲಿದೆ. ಕಳೆದ 6 ಮತ್ತು 7 ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು. 9 ರಂದು ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಮತ್ತು ಗುಬ್ಬಿ ತಾಲೂಕಿನ ಚುನವಣೆಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ಕೆ.ಬಿ. ಕ್ರಾಸ್‌ನ ಮಾತಾ ಕನ್ವೆಂಷನ್ ಹಾಲ್‌ನಲ್ಲಿ ನಡೆಯಲಿದೆ. 10 ರಂದು ಕಾಂಗ್ರೆಸ್ ಕಚೇರಿಯಲ್ಲಿ ತುಮಕೂರು ನಗರ, ಕೊರಟಗೆರೆ, ಮಧುಗಿರಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ ಎಂದು ಆರ್ ರಾಜೇಂದ್ರ ತಿಳಿಸಿದ್ದಾರೆ.
ನಾಳೆ ಯುವ ಜನತದಾಳ ಸಭೆ
ತುಮಕೂರು: ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಜ.9 ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಯುವ ಜನತಾದಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪುನರ್ ರಚಿಸಬೇಕಾಗಿರುವುದರಿಂದ ಪ್ರತಿಯೊಬ್ಬರೂ ಸಭೆಗೆ ಹಾಜರಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ತಿಳಿಸಿದ್ದಾರೆ.
18 ರಂದು ಶೈಕ್ಷಣಿಕ ಉನ್ನತಿ ಕಾರ್ಯಕ್ರಮ
ತುಮಕೂರು: ತುಮಕೂರಿನ ಸಿದ್ಧಗಂಗಾ ಕಾಲೇಜಿನ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಜ.18 ರಂದು ಶನಿವಾರ ಬೆಳಗ್ಗೆ 10.30 ಕ್ಕೆ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ನಾಯಕತ್ವ ರೂಢಿಸಿಕೊಳ್ಳುವ ಶೈಕ್ಷಣಿಕ ಉನ್ನತಿ ಕಾರ್ಯಕ್ರಮ ನಡೆಯಲಿದೆ. ಡಾ. ಗುರುರಾಜ ಕರಜಗಿ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಸಕ್ತರು ಜ.10 ರೊಳಗೆ ನೋಂದಾಯಿಸಿಕೊಳ್ಳಲು ಎಸ್. ಕುಮಾರಸ್ವಾಮಿ, ಎಚ್.ಎಸ್. ನಿರಂಜನಾರಾಧ್ಯ ತಿಳಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಗ್ ದಂಧೆ: ವ್ಯಕ್ತಿ ಬಂಧನ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬೆಟ್ಟಿಂಗ್ ಹಣದ ಸಮೇತ ಬಂಧಿಸಿದ್ದಾರೆ. ಪಟ್ಟಣದ ಮತಿಘಟ್ಟ ಗೇಟ್‌ಬಳಿ ರಾಘವೇಂದ್ರ ಕಾಂಡಿಮೆಂಟ್ಸ್ ಮಾಲೀಕರಾದ ಗುರುಮೂರ್ತಿ ಎಂಬುವವನನ್ನು ಬಂಧಿಸಿರುವ ಪೊಲೀಸರು, ಆತನಿಂದ ಬೆಟ್ಟಿಂಗ್‌ನಲ್ಲಿ ತೊಡಗಿಸಿದ್ದ 40ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಗುರುಮೂರ್ತಿಯ ಮೇಲೆ ವೃತ್ತನಿರೀಕ್ಷಕ ಜಯಕುಮಾರ್ ಮಾರ್ಗದರ್ಶನದಂತೆ ಪಿಎಸ್‌ಐ ಎಸ್.ಮುನಿರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.