ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಲವು ಬೇಡಿಕೆಗಳ ಈಡೇರಿಕೆಗಾಗಿ ಬಿಸಿಯೂಟ ತಯಾರಕರ ರಸ್ತೆ ತಡೆ

Vishwanath S
Updated On : 8 Jan 2014, 12:59 pm

ಶಿರಾ: 5000 ರು. ಮಾಸಿಕ ಕನಿಷ್ಠ ವೇತನ, ಪಿಂಚಣಿ ವ್ಯವಸ್ಥೆ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಅಕ್ಷರ ದಾಸೋಹ, ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ನಗರದಲ್ಲಿ ಬೃಹತ್ ಜೈಲ್ ಬರೋ ಹಾಗೂ ರಸ್ತೆ ತಡೆ ಚಳವಳಿ  ನಡೆಯಿತು.
ಚಳವಳಿಯ ಮುಖಂಡತ್ವ ವಹಿಸಿದ್ದ ಸಂಘಟನೆಯ ಮುಖಂಡರು ಮಾತನಾಡಿ ರಾಜ್ಯದಲ್ಲಿ ಬಿಸಿಯೂಟ ಯೋಜನೆ ಜಾರಿಗೆ ಬಂದು 10ವರ್ಷಗಳು ಕಳೆದಿವೆ. 65 ಲಕ್ಷ ಫಲಾನುಭವಿ ಶಾಲಾ ಮಕ್ಕಳು ಯೋಜನೆಯ ಪ್ರಯೋಜನ ಪಡೆಯುತ್ತಿದ್ದು ಅವರ ಹಾಜರಾಗಿ ಹಾಗೂ ಗುಣಮಟ್ಟ ಬಿಸಿಯೂಟದಿಂದ ವೃದ್ಧಿಯಾಗಿದ್ದು, ಆದರೆ ಯೋಜನೆಯ ಯಶಸ್ವಿಗಾಗಿ ದುಡಿಯುತ್ತಿರುವ 1.8 ಲಕ್ಷ ಅಕ್ಷರ ದಾಸೋಹ, ಬಿಸಿಯೂಟ ತಯಾರಕರ ಬವಣೆ ಯಾರು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ ಕೇವಲ 300 ರು.,400 ರು.ಸಂಭಾವನೆ ಪಡೆಯುತ್ತ, 2003 ರಿಂದ 2009 ರ ಸಾಲಿಯವರೆಗೂ ದುಡಿದಿದ್ದಾರೆ. 2009 ಡಿಸೆಂಬರ್‌ನಿಂದ ಮುಖ್ಯ ಅಡುಗೆಯವರಿಗೆ 1100 ಉಳಿದವರಿಗೆ ಮಾಸಿಕ 1000 ರು. ಸಿಗುತ್ತಿದ್ದು, ಕನಿಷ್ಠ ವೇತನದಷ್ಟು ಸಿಗುತ್ತಿಲ್ಲ.
ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ದಿನಗೂಲಿ 180 ರು. ಇದ್ದು ಇವರಿಗೆ ಹೋಲಿಕೆ ಮಾಡಿದಲ್ಲಿ ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಈ ಸಂಬಳ ತೆಗೆದುಕೊಂಡು ಜೀವನ ನಡೆಸಲು ಕಷ್ಟವಾಗಿದೆ ಎಂದರು.
ನಮಗೆ ಪಿಂಚಣಿ ವ್ಯವಸ್ಥೆ, ಜಾರಿಗೆ ಬರಲಿ, ಕೆಲಸದ ಭದ್ರತೆ ನೀಡಲಿ, ಇಎಸ್‌ಐ., ಭವಿಷ್ಯ ನಿಧಿ ಯೋಜನೆಗಳಂತಹ ಸಾಮಾಜಿಕ ಭದ್ರತಾ ಯೋಜನೆಗಳು ನಮಗೆ ಸಿಗಲಿ, ಪಕ್ಕದ ಕೇರಳ ರಾಜ್ಯದಲ್ಲಿ ಮಾಸಿಕ 4500 ರು. ತಮಿಳುನಾಡಿನಲ್ಲಿ 5500 ರು. ವೇತನ ಸಿಗುತ್ತಿದೆ. ತಮಿಳು ನಾಡಿನಲ್ಲಿ ಅರೆಕಾಲಿಕ ನೌಕರರೆಂದು ಪರಿಗಣಿಸಲಾಗಿದೆ ನಮಗೂ ಈ ವ್ಯವಸ್ಥೆ ಜಾರಿಗೆ ಬರಲಿ ಎಂದು ಒತ್ತಾಯಿಸಿದರು.
ಪ್ರವಾಸಿ ಮಂದಿರದಿಂದ ಹೊರಟ ತಾಲೂಕು ಬಿಸಿಯೂಟ ತಯಾರಕರ ದಂಡು ಪ್ರವಾಸಿಮಂದಿರದ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿದರು. ನಂತರ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.  ಬ್ಯಾಟರಂಗೇಗೌಡ, ಗಿರಿಜಣ್ಣ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement