ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಆದೇಶಪತ್ರ ವಿತರಣೆ
ಹುಳಿಯಾರು: ಪಟ್ಟಣದ ನಾಡಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅಂಗವಿಕಲ, ಸಂಧ್ಯಾ ಸುರಕ್ಷಾ, ವಿಧವಾ, ಮನಸ್ವಿನಿ ಪಿಂಚಣಿ ಪಡೆಯಲು ಅರ್ಹರಾದ ಹೋಬಳಿ ವ್ಯಾಪ್ತಿಯ ಫಲಾನುಭವಿಗಳಿಗೆ ಆದೇಶಪತ್ರವನ್ನು ತಿಪಟೂರು ಉಪವಿಭಾಗಧಿಕಾರಿ ಸಿಂಧು ವಿತರಿಸಿದರು. ಈ ಸಂದರ್ಭದಲ್ಲಿ ಫಲಾನುಭವಿಗಳ ಸಮಸ್ಯೆಗಳನ್ನು ಅಲಿಸಿದ ಅವರು, ಮಾಸಿಕ ಪಿಂಚಣಿ ಬಾರದೇ ಸ್ಥಗಿತಗೊಂಡಿರುವವರು ಪುನಃ ಹೊಸ ಅರ್ಜಿಯನ್ನು ನೀಡುವಂತೆ ತಿಳಿಸಿದರು. ಸ್ಥಗಿತವಾಗಿರುವ ಫಲಾನುಭವಿಗಳ ಬಗ್ಗೆ ಸಮೀಕ್ಷೆ ನಡೆಯುತ್ತಿದೆ, ಅಲ್ಲಿಯವರೆಗೂ ಹೊಸ ಅರ್ಜಿಸಲ್ಲಿಸಿ, ಹೊಸ ಅದೇಶ ಪತ್ರವನ್ನು ಪಡೆದು ಪಿಂಚಣಿ ಪಡೆಯುವಂತೆ ತಿಳಿಸಿದರು.
ಅಂಕವಿಕಲ ವೃದ್ಧನೊಬ್ಬ ನನಗೆ ನಡೆಯಲು ಆಗುವುದಿಲ್ಲ, ನನಗೆ ಸರ್ಕಾರದ ಕಡೆಯಿಂದ ತ್ರಿಚಕ್ರ ವಾಹನ ಕೊಡಿಸುವಂತೆ ಕೇಳಿಕೊಂಡಾಗ ಆತನ ನೋವನ್ನು ಕಂಡು ಮನಕರಗಿ, ಆತನ ಮಾತಿಗೆ ಸ್ಪಂದಿಸಿದ ಉಪವಿಭಾಗಧಿಕಾರಿ ಅವರು ತಮ್ಮ ಇಲಾಖೆಯಿಂದ ಇಂತಹ ಯಾವುದೇ ಸೌಲಭ್ಯಗಳಿಗೆ ಅವಕಾಶವಿಲ್ಲ. ಆದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ತ್ರಿಚಕ್ರವಾಹನವನ್ನು ಕೊಡಿಸುವುದಾಗಿ ಭರವಸೆ ನೀಡಿದರಲ್ಲದೆ, ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಶೀಘ್ರವೇ ಪತ್ರ ಬರೆಯುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು. ಪಡಿತರಚೀಟಿ ವಿತರಣೆ ಸಮರ್ಪಕವಾಗಿ ಆಗದೇ, ಹಿಂದುಳಿದ, ಮಧ್ಯಮ ವರ್ಗದವರು ಪ್ರಯಾಸ ಪಡುವಂತಾಗಬೇಕಾಗಿದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಎಸಿ ಅವರು, ಪಡಿತರಚೀಟಿಗಳ ವಿತರಣೆಯಲ್ಲಿನ ದೋಷಗಳನ್ನು, ಸರಿಯಾಗಿ ವಿತರಣೆಯಾಗದೇ ಇರುವುದನ್ನು ಲಿಖಿತ ರೂಪದಲ್ಲಿ ದೂರು ನೀಡುವಂತೆ ತಿಳಿಸಿದರು. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವರ ಸಮೀಕ್ಷೆ ನಡೆಯುತ್ತಿರುವುದರಿಂದ ಯಾವುದೇ ಹೊಸ ಕಾರ್ಡ್ಗಳನ್ನು ವಿತರಿಸುತ್ತಿಲ್ಲ ಎಂದರು. ತಹಸೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ, ಪಿಂಚಣಿ ಸ್ಥಗಿತಗೊಂಡಿರುವ ಅರ್ಹಫಲಾನುಭಾವಿಗಳು ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕಿದ್ದು, ಅದಕ್ಕಾಗಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ವೈದ್ಯರ ಪ್ರಮಾಣಪತ್ರವಿಲ್ಲದಿದ್ದರೂ ಸಹ ಈಗಾಗಲೇ ವೇತನ ಪಡೆಯುತ್ತಿರುವುದರ ಬಗ್ಗೆ ಅಂಚೆ ಇಲಾಖೆ ನೀಡುತ್ತಿದ್ದ ಎಂ.ಓ ರಶೀತಿಯನ್ನು ಲಗತ್ತಿಸುವಂತೆ ತಿಳಿಸಿದರು.
ಪಿಂಚಣಿ ಅದಾಲತ್ನಲ್ಲಿ ಅಂಗವಿಕಲ, ಸಂಧ್ಯಾ ಸುರಕ್ಷಾ, ವಿಧವಾ, ಮನಸ್ವಿನಿ ವೇತನ ಪಡೆಯಲು ಅರ್ಹರಾದ 72 ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಪುಟ್ಟರಾಮಯ್ಯ, ಪ್ರಬಾರ ಉಪತಹಸೀಲ್ದಾರ್ ಹನುಮಂತನಾಯಕ್, ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷೆ ಅಭಿದುನ್ನಿಸಾ, ಗ್ರಾಮಲೆಕ್ಕಿಗರಾದ ತಿಪ್ಪೇಸ್ವಾಮಿ, ಚಿದಾನಂದ್ ಮೂರ್ತಿ, ಸುರೇಶ್, ರಂಗಯ್ಯ ಕಂದಾಯ ಇಲಾಖೆಯ ಭುವನೇಶ್ವರಿ ಸೇರಿದಂತೆ ಇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.