ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅವೈಜ್ಞಾನಿಕ ಮರಳು ನೀತಿ ಹಿಂದೆ ಪಡೆಯಲು ಆಗ್ರಹ

Vishwanath S
Updated On : 9 Jan 2014, 1:05 am

ಕ.ಪ್ರ.ವಾರ್ತೆ ,  ತುಮಕೂರು ,  ಜ.8
ಅವೈಜ್ಞಾನಿಕ ಮರಳು ನೀತಿ ಹಿಂಪಡೆಯುವಂತೆ ತುಮಕೂರು ಮೆಟೀರಿಯಲ್ಸ್ ಲಾರಿ ಓನರ್ಸ್ ಅಸೋಸಿಯೇಷನ್ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಚಿ ನಡೆಸಿದ ಸಂಘದ ಪದಾಧಿಕಾರಿಗಳು, ಕಳೆದ 18 ದಿನಗಳಿಂದ ರಾಜ್ಯಾದ್ಯಂತ ಮರಳು ಲಾರಿ ಹಾಗೂ ಟ್ರಾಕ್ಟರ್ ಮುಷ್ಕರ ನಡೆಯುತ್ತಿದ್ದು, ಮರಳು ಉದ್ಯಮವನ್ನೇ ನೆಚ್ಚಿಕೊಂಡಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಚಾಲಕರು, ಜನ ಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ.
ಈ ಹಿಂದೆ ರಾಜ್ಯದಲ್ಲಿ ಹರಾಜಿನ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಹೊಂದಿರುವ ಮರಳು ಗುತ್ತಿಗೆದಾರರಿಂದ ಪರ್ಮಿಟ್ ಪಡೆದು ಮರಳು ಸಾಗಾಣಿಕೆ ಮಾಡುತ್ತಿದ್ದ ನಾವು, ಕ್ರಮೇಣವಾಗಿ, ಎಲ್ಲ ಗುತ್ತಿಗೆದಾರರನ್ನು 31-3-2011 ರಂದು ಮುಕ್ತಾಯಗೊಳಿಸಿ, 1-4-2011 ರಿಂದ ಹೊಸ ಮರಳು ನೀತಿ ಜಾರಿಗೆ ತಂದು ಲೋಕೋಪಯೋಗಿ ಇಲಾಖೆಗೆ ವಹಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಗುರುತಿಸಿರುವ ಜಿಲ್ಲೆಯ ಒಟ್ಟು 796 ಎಕರೆ ಪ್ರದೇಶದಲ್ಲಿರುವ ಮರಳನ್ನು ಹರಾಜು ಮೂಲಕ ತೆಗೆಸಿ, ಯಾರ್ಡ್‌ಗಳಿಗೆ ಸಾಗಿಸಿ, ಅಲ್ಲಿಂದ ಜಿಲ್ಲಾ ಟಾಸ್ಕ್ ಫೋರ್ಸ್ ಕಮಿಟಿ ನಿರ್ಧರಿಸಿದ ಮೊತ್ತವನ್ನು ಡಿಡಿ ಮುಖಾಂತರ ಪಡೆದು ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸುವ ಜವಾಬ್ದಾರಿಯನ್ನು ಪಿಡಬ್ಲ್ಯೂಡಿಗೆ ವಹಿಸಲಾಯಿತು. ಆದರೆ ಇದಾವುದನ್ನು  ಜಾರಿಗೆ ತರದೆ  ಜಿಲ್ಲಾಡಳಿತ ಬೇಜವಾಬ್ದಾರಿತನ ಪ್ರದರ್ಶಿಸಿದೆ. ಕಳೆದ ಎರಡು ಮುಕ್ಕಾಲು ವರ್ಷಗಳಲ್ಲಿ ಕೇವಲ 1500 ರಿಂದ 2000 ಲೋಡ್ ಮರಳನ್ನು ಮಾತ್ರ ಜಿಲ್ಲಾಡಳಿತ ನೀಡಲು ಸಾಧ್ಯವಾಗಿದೆ ಎಂದು ಸಂಘ ದೂರಿತು.
ಜಿಲ್ಲಾಡಳಿತದ ನಿಷ್ಕ್ರಿಯತೆ ವಿರುದ್ಧ ನಮ್ಮ ಸಂಘವು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆ ಜಿಲ್ಲಾಧಿಕಾರಿಗಳು 2-7-2013 ರಂದು ಜಿಲ್ಲಾ ಮರಳು ಬ್ಲಾಕ್‌ಗಳನ್ನು ಗುರುತಿಸಿ, ಮರಳು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹಾಗೂ ಲಾರಿ ಮಾಲೀಕರು ಹಳದಿ ಬಣ್ಣದ ಬೋರ್ಡ್‌ಗಳನ್ನು ಹಾಕಿ, ಜಿಪಿಎಸ್ ಅಳವಡಿಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮರಳು ಸಾಗಾಣಿಕೆ ವಾಹನ ಎಂದು ನೋಂದಾಯಿಸಿಕೊಂಡು ಬಂದರೂ ಸಹ ಮರಳು ನೀಡಲು ಜಿಲ್ಲಾಡಳಿತ ವಿಫಲವಾಗಿದೆ. ಆದರೆ ಜರುಗಿಸಬಹುದಾದ ಎಲ್ಲ ಕಾನೂನು ಕ್ರಮಗಳನ್ನು ಉತ್ಸುಕತೆಯಿಂದ ಮಾಡುತ್ತಿದ್ದು, ಲಕ್ಷಾಂತರ ರು. ಗಳ ದಂಡ ವಸೂಲಿ ಮಾಡಿ, ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗುತ್ತಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಈ ಮಧ್ಯೆ ಸರ್ಕಾರ ಹಳೆಯ ಕಾಯಿದೆಗೆ ಕೆಲ ತಿದ್ದುಪಡಿ ತಂದು ಮುಖ್ಯವಾಗಿ ಮರಳು ಸಾಗಣೆದಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಉತ್ಸುಕವಾಗಿರುವುದು ಕಂಡು ಬರುತ್ತಿದೆ ಎಂದು ಸಂಘ ತಿಳಿಸಿದೆ.
ಸರ್ಕಾರ ಕೂಡಲೇ ಈ ಅವೈಜ್ಞಾನಿಕ ಮರಳು ನೀತಿಯನ್ನು ಕೈ ಬಿಟ್ಟು, ಕಾನೂನು ತಜ್ಞರು, ಬುದ್ಧಿಜೀವಿಗಳು, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿ, ಮರಳು ಸಾಗಾಣಿಕೆದಾರರಿಗೆ ಅನಾನುಕೂಲವಾಗದಂತೆ ಮರಳು ನೀತಿ ಜಾರಿಗೆ ತರಬೇಕೆಂದು ಸಂಘದ ಅಧ್ಯಕ್ಷರಾದ ಸಿ. ಪ್ರಕಾಶ್, ಉಪಾಧ್ಯಕ್ಷರಾದ ಡಿ.ಎಂ. ಬೊಮ್ಮಣ್ಣ, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ಖಜಾಂಚಿ ನರಸಿಂಹಮೂರ್ತಿ, ರೋಟರಿ ಹಾಗೂ ಲಾರಿ ಮಾಲೀಕರ ಸಂಘದ ಸದಾಶಿವಯ್ಯ, ಪರಮಶಿವಯ್ಯ ಹಾಗೂ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement