ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಕ್ಕಳ ರ್ಯಾಪಿಡ್ ಚದುರಂಗ ಸ್ಪರ್ಧೆಗೆ ಆಹ್ವಾನ

Vishwanath S
Updated On : 9 Jan 2014, 1:07 am

ತುರುವೇಕೆರೆ: ಲಯನ್ಸ್ ಕ್ಲಬ್ ಹಾಗೂ ತುರುವೇಕೆರೆ ಸ್ಫೋರ್ಟ್ಸ್ ವತಿಯಿಂದ ಜಿಲ್ಲಾ ಮಟ್ಟದ ಮುಕ್ತ ಬ್ಲಿಟ್ಜ್ ಮತ್ತು ಮಕ್ಕಳ ರ್ಯಾಪಿಡ್ ಚದುರಂಗ ಸ್ಪರ್ಧೆಯನ್ನು ಜ.12 ರಂದು ಭಾನುವಾರ ಬೆಳಗ್ಗೆ 10 ರಿಂದ ಬೇಟೇರಾಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಪ್ರವೇಶ ಶುಲ್ಕ 100 ರು.ಗಳು. ಮುಕ್ತ ಬ್ಲಿಟ್ಜ್ ಚದುರಂಗ ಸ್ಪರ್ಧೆ  (ಯಾರು ಬೇಕಾದರೂ ಸ್ಪರ್ಧಿಸಬಹುದು.) ಮಕ್ಕಳ ವಯೋವಾನ ಸ್ಪರ್ಧೆಗಳು- ರ್ಯಾಪಿಡ್ ಚದುರಂಗ ಸ್ಪರ್ಧೆ, 12 ಮತ್ತು 15 ವರ್ಷದೊಳಗಿನ ಮಕ್ಕಳಿಗಾಗಿ ಚದುರಂಗ ಸ್ಪರ್ಧೆ ಏರ್ಪಡಿಸಲಾಗಿದೆ. ಮಕ್ಕಳ ವಿಭಾಗದಲ್ಲಿ ಸ್ಪರ್ಧಿಸಬಯಸುವವರು ತಮ್ಮ ಶಾಲೆಯಿಂದ ಪ್ರಮಾಣ ಪತ್ರ ತರಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ  ಟಿ.ಎ.ವಿ ಗುಪ್ತಾ- 9448403174, ಡಾ.ಎ.ನಾಗರಾಜ್ - 9448416767, ಚಂದ್ರಶೇಖರ್ ಉಪಾಧ್ಯಾಯ - 9480710044 ಗೆ ಸಂಪರ್ಕಿಸಲು ಕೋರಲಾಗಿದೆ. ಈ ಸಂಸ್ಥೆ ಇದುವರೆಗೂ 3 ರಾಜ್ಯ ಮಟ್ಟದ ಮತ್ತು 20 ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಗಳನ್ನು ನಡೆಸಿದೆ.
ನಾಳೆಯಿಂದ ರಾಜ್ಯಮಟ್ಟದ ಖೋ-ಖೋ ಸ್ಪರ್ಧೆ
ಗುಬ್ಬಿ:  ಕಳೆದ 30 ವರ್ಷಗಳಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಪಟ್ಟಣದ  ಶ್ರೀಚನ್ನಬಸವೇಶ್ವರ ಯುವಕ ಸಂಘವು ಸ್ವಾಮಿ ವಿವೇಕಾನಂದರ ನೆನಪಿಗಾಗಿ ಜನವರಿ 10 ರಿಂದ 12ರವರೆಗೆ ರಾಜ್ಯಮಟ್ಟದ ಖೋ-ಖೋ ಸ್ಪರ್ಧೆ ನಡೆಯಲಿದೆ. ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶ್ರೀರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಪಂದ್ಯಾವಳಿಗಳನ್ನು ಉದ್ಘಾಟಿಸಲಿದ್ದಾರೆ.  3 ದಿನಗಳ ಆಹ್ವಾನಿತ 22ನೇ ಪುರುಷ, ಮಹಿಳಾ, ಕಿರಿಯ ಬಾಲಕರ ಖೋ-ಖೋ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದ್ದು 1 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಂದ್ಯಾವಳಿಗಳಲ್ಲಿ ಭಾಗವಹಿಸಲಿದ್ದಾರೆಂದು ಸಮಿತಿ ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಜಿ.ಡಿ.ಸುರೇಶ್‌ಗೌಡ ತಿಳಿಸಿದರು.
ನಾಳೆ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಮಾವೇಶ
ಕುಣಿಗಲ್: ಜಿಪಂ ತುಮಕೂರು, ಸಾರ್ವಜನಿಕ ಶಿಕ್ಷಣ ಇಲಾಖೆ (ದಕ್ಷಿಣ) , ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲೂಕು ಶಾಖೆ  ಸಂಯುಕ್ತಾಶ್ರಯದಲ್ಲಿ ಜ.10 ರಂದು ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಮಾವೇಶ ಹಾಗೂ ಪಠ್ಯಾಧಾರಿತ ವಸ್ತಪ್ರದರ್ಶನವನ್ನು ಪಟ್ಟಣದ ಬಿಜಿಎಸ್ ಪ.ಪೂ.ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಂಘದ ಅಧ್ಯಕ್ಷ ನಿಡಸಾಲೆ ಗಂಗಾಧರ್ ತಿಳಿಸಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ವಸ್ತುಪ್ರದರ್ಶನ ಮಳಿಗೆ, ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಡಿ. ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದು ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇಂದು ಶಾಲಾ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮ
ಗುಬ್ಬಿ: 2013-14 ನೇ ಸಾಲಿನ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮವನ್ನು ಇಲಾಖಾ ನಿಯಗಳಿಗನುಸಾರವಾಗಿ ಜ.9 ರಂದು ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ. ಹೋಬಳಿ ಮಟ್ಟದ ಕಲಿಕೋತ್ಸವಗಳಲ್ಲಿ ವಿಜೇತರಾದ ಮಕ್ಕಳನ್ನು ತಾಲೂಕು ಮಟ್ಟದ ಕಲಿಕೋತ್ಸವಕ್ಕೆ ಕರೆತರುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಸೂಚಿಸಿದ್ದಾರೆ.
ಪೂರ್ವಭಾವಿ ಸಭೆ
ಶಿರಾ: ಬೆಂಗಳೂರಿನಲ್ಲಿ ನಡೆಯಲಿರುವ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶದ ಬಗ್ಗೆ ನಗರದ ಶ್ರೀ ಕನಕ ಪತ್ತಿನ ಸಹಕಾರಿ ಸಂಘದಲ್ಲಿ ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಮಾಜಿ ಶಾಸಕ ಹಾಗೂ ಅಹಿಂದ ಹಿರಿಯ ಮುಖಂಡ ಎಸ್.ಕೆ.ದಾಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಮಟ್ಟದ ಅಹಿಂದಾ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ವಿಷಯ ಕುರಿತಂತೆ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ ಅಂದಿನ ಸಮಾವೇಶಕ್ಕೆ ಶಿರಾ ತಾಲೂಕಿನಿಂದ ಹೆಚ್ಚು ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಸಂಘಟಿಸಬೇಕೆಂದು ತೀರ್ಮಾನಿಸಲಾಯಿತು.  ಮುಖಂಡರಾದ ಭಾನುಪ್ರಕಾಶ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ವೈಕುಂಠ ಏಕಾದಶಿ
ಚೇಳೂರು: ಗುಬ್ಬಿ ತಾಲೂಕು, ಹೊಸಕೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಜನವರಿ 11 ರಂದು ಶನಿವಾರ ಹಮ್ಮಿಕೊಳ್ಳಲಾಗಿದೆ.
ಕೂಲಿಕಾರರ ಪ್ರತಿಭಟನೆ: ಅಧ್ಯಯನ ತಂಡದ ವೀಕ್ಷಣೆಗೆ ಅಡ್ಡಿ
ಪಾವಗಡ: ಖಾತ್ರಿ ಯೋಜನೆ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದ ಕೇಂದ್ರ ಅಧ್ಯಯನ ತಂಡವನ್ನು ಕಾಮಗಾರಿಗಳ ವಿಕ್ಷಣೆಗೆ ಅವಕಾಶ ನೀಡದೇ ವಾಪಸು ಕಳುಹಿಸಿದ ಪ್ರಸಂಗ ಮಂಗಳವಾರ ಪಟ್ಟಣದ ತಾಪಂನಲ್ಲಿ ನಡೆಯಿತು.
ಬರಗಾಲದ ಹಿನ್ನಲೆಯಲ್ಲಿ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ತಾಲೂಕಿನದ್ಯಂತ ಭರದಿಂದ ಸಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಕೂಲಿಕಾರರಿಂದ ನಿರ್ವಹಿಸಿದ ಖಾತ್ರಿ ಯೋಜನೆ ಕಾಮಗಾರಿಗಳ ವೀಕ್ಷಣೆಗೆ ಅಧ್ಯಯನ ತಂಡ ಪಾವಗಡ ಪಟ್ಟಣಕ್ಕೆ ಆಗಮಿಸಿತ್ತು. ತಾಪಂ ಇಒ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ತಾ.ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒ, ಕಾರ್ಯದರ್ಶಿಗಳ ಸಭೆ ತಾಪಂನಲ್ಲಿ ಏರ್ಪಡಿಸಿ ಯೋಜನೆ ಅನ್ವಯ ವಿವರ ಪಡೆಯುವ ಸಂದರ್ಭದಲ್ಲಿ ಏಕಾಏಕಿ ಸಭೆಗೆ ಪ್ರವೇಶ ಮಾಡಿದ ಅನೇಕ ಮಂದಿ ಗ್ರಾಮೀಣ ಕೂಲಿಕಾರರು ಕಳೆದ 2010-11ನೇ ಸಾಲಿನಲ್ಲಿ ಕೂಲಿಕಾರರಿಂದ ನಿರ್ವಹಿಸಲಾದ ಗುಣಮಟ್ಟದ ಕಾಮಗಾರಿಗಳ ಸುಮಾರು 21ಕೋಟಿ ಹಣ ಬಿಡುಗಡೆ ಮಾಡುವವರೆಗೂ ಹೊಸ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ ಹಾಗೂ ಪ್ರಸಕ್ತ ಸಾಲಿನ ಕಾಮಗಾರಿಗಳ ವೀಕ್ಷಣೆ ಮತ್ತು ಅಧಿಕಾರಿಗಳ ಸಭೆಗಳು ನಡೆಸಲು ನಾವು ಅವಕಾಶ ನೀಡುವುದಿಲ್ಲವೆಂದು ಪ್ರತಿಭಟಿಸಿದರು.
2010-11ನೇ ಸಾಲಿನಲ್ಲಿ ಕೂಲಿಕಾರರಿಂದ ನಿರ್ವಹಿಸದ 21ಕೋಟಿ ವೆಚ್ಚದ ಕಾಮಗಾರಿಗಳ ವಿವರ ಹಾಗೂ ದಾಖಲಾತಿ ವಿವರ ಪಡೆದ ಕೇಂದ್ರ ತಂಡ ಅಧಿಕಾರಿಗಳ ಸಭೆ ಮೊಟಕುಗೊಳಿಸಿ, ಪ್ರಸಕ್ತ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ವೀಕ್ಷಣೆಗೆ ಕೂಲಿಕಾರರು ಅವಕಾಶ ನೀಡದ ಕಾರಣ ಕೇಂದ್ರ ತಂಡ ವಾಪಸ್  ತೆರಳಿತು.
ಪ್ರಥಮ ಸ್ಥಾನ: ಸನ್ಮಾನ
ತಿಪಟೂರು: ತಾಲೂಕಿನ ಶಿವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ 2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಐದು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದಿರುವ ವಿದ್ಯಾರ್ಥಿ ಎಚ್.ಪಿ.ತನುಶ್ರೀ ಅವರಿಗೆ ಶಾಸಕ ಕೆ. ಷಡಕ್ಷರಿ ಹಾಗೂ ಮಾಜಿ ಶಾಸಕ ಬಿ.ಸಿ. ನಾಗೇಶ್ ಸನ್ಮಾನಿಸಿದರು.
ಕೆಳಗಿರುವವರಿಗೆ ಖಾತೆ ನೀಡುವ ಇಂಗಿತ: ಸೊರಕೆ
ತುಮಕೂರು: ಸರ್ಕಾರಿ ಜಾಗಗಳನ್ನು ಒತ್ತುಮೋರಿ ಮಾಡಿಕೊಂಡು ಮನೆ ಕಟ್ಟಿರುವ ಬಡತನ ರೇಖೆಗಿಂತ ಕೆಳಗಿರುವವರಿಗೆ ಖಾತೆ ನೀಡುವ ಇಂಗಿತವನ್ನು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ವ್ಯಕ್ತಪಡಿಸಿದರು. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದೇ ತಿಂಗಳು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ  ಭರವಸೆ ನೀಡಿದರು. ಕಳೆದ ವಿಧಾನಸಭಾ ಅಧಿವೇಶದಲ್ಲಿ ಅಸೆಂಬ್ಲಿಯಲ್ಲಿ ಒಪ್ಪಿಗೆ ಸಿಕ್ಕಿದೆ. ಪರಿಷತ್‌ನಲ್ಲಿ ಇನ್ನು ಸಿಕ್ಕಿಲ್ಲ.  ಪರಿಷತ್ ನಲ್ಲಿ ಅನುಮತಿ ಸಿಕ್ಕ ಕೂಡಲೇ ಖಾತೆ ಮಾಡಿಕೊಡುವ ಇಂಗಿತ ವ್ಯಕ್ತಪಡಿಸಿದರು. ನಗರಗಳಲ್ಲಿ ಒತ್ತುವರಿ ಮಾಡಿರುವ ಸಂಬಂಧ ಎ.ಟಿ. ರಾಮಸ್ವಾಮಿ ಮತ್ತು ಸುಬ್ರಹ್ಮಣ್ಯ ವರದಿ ಆಧಾರದ ಮೇಲೆ ಸದನ ಉಪಸಮಿತಿ ನೇಮಿಸಿ ಸಮಿತಿ ವರದಿ ಕೊಟ್ಟ ಕೂಡಲೇ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement