ಯುವ ಜನಾಂಗ ರಾಷ್ಟ್ರದ ಅಮೂಲ್ಯ ಸಂಪತ್ತು
ತುಮಕೂರು: ಯುವ ಜನಾಂಗದಲ್ಲಿ ಆದರ್ಶ ಗೊತ್ತುಗುರಿಗಳಿದ್ದರೆ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ. ಯೋಗ್ಯ ಶಿಕ್ಷಣ ಮತ್ತು ಸಂಸ್ಕಾರ ಕೊಟ್ಟಲ್ಲಿ ಯುವ ಜನಾಂಗ ಈ ರಾಷ್ಟ್ರದ ಅಮೂಲ್ಯ ಸಂಪತ್ತು ಆಗಲು ಸಾಧ್ಯವಿದೆ ಎಂದು
ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಜರುಗುತ್ತಿರುವ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದಲ್ಲಿ ಆಯೋಜಿಸಿದ್ದ ಯುವಗೋಷ್ಠಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀವನದಲ್ಲಿ ಕನಸು ಮತ್ತು ಗುರಿ ಮುಖ್ಯ. ಕನಸಿನಲ್ಲಿ ಕಂಡಿದ್ದು ಸಾಧಿಸುವ ಛಲ ಇರಬೇಕು. ಸಾಧನೆ ಹಾದಿಯಲ್ಲಿ ಕಲ್ಲು ಮುಳ್ಳು ಇದ್ದೇ ಇರುತ್ತದೆ. ಎಷ್ಟೋ ಜನ ಬದುಕಿಗೆ ಕಲ್ಲು ಎಸೆಯುವ ಜನ ಇದ್ದೇ ಇರುತ್ತಾರೆ. ಎಸೆದ ಕಲ್ಲುಗಳಿಂದ ಅಡ್ಡಗೋಡೆಯನ್ನಾದರೂ ನಿರ್ಮಿಸಬಹುದು ಇಲ್ಲವೇ ಸೇತುವೆಯನ್ನಾದರೂ ನಿರ್ಮಿಸಬಹುದು. ಆಯ್ಕೆ ಮಾತ್ರ ಅವರಿವರಿಗೆ ಸೇರಿದ್ದು ಎಂಬುದನ್ನು ಮರೆಯಬಾರದು ಎಂದರು.
ಯೌವ್ವನ, ಧನಸಂಪತ್ತು, ಅವಿವೇಕ ಮತ್ತು ಪ್ರಭುತ್ವ ಈ ನಾಲ್ಕರಲ್ಲಿ ಒಂದಿದ್ದರೆ ಸಾಕು ಮನುಷ್ಯ ನಾಶವಾಗುತ್ತಾನೆ. ಈ ನಾಲ್ಕು ಒಂದೇ ಕಡೆ ಸೇರಿದಾಗ ಆತಂಕಕ್ಕೆ ಲೆಕ್ಕವೇ ಇಲ್ಲ. ಸದ್ದು ಗದ್ದಲವಿಲ್ಲದ ಸಾಧನೆ ನಮ್ಮದಾಗಬೇಕು. ನಾಣ್ಯಗಳು ಮೌಲ್ಯದಲ್ಲಿ ಕಡಿಮೆ ಇದ್ದರೂ ಅವು ಅತಿ ಹೆಚ್ಚು ಶಬ್ಧವಾಗುತ್ತದೆ ನೋಟುಗಳು ಹಾಗಲ್ಲ ಹೆಚ್ಚು ಮೌಲ್ಯವಿದ್ದರೂ ಸದ್ದು ಕೇಳಿಸದು ಹಾಗೆಯೇ ಮನುಷ್ಯನ ಬದುಕು ಆಗಬೇಕು ಕ್ಷುಲ್ಲುಕ ಕಾರಣಕ್ಕಾಗಿ ನೈಜ ಸಂಬಂಧಗಳನ್ನು ಕಳೆದುಕೊಳ್ಳಬಾರದು ಎಂದರು. ಕಳೆದುಕೊಳ್ಳುವುದು ಸುಲಭ. ಗಳಿಸುವುದು ಕಷ್ಟದ ಕೆಲಸ. ಯುವ ಜನಾಂಗ ಧರ್ಮ ಸಂಸ್ಕೃತಿ ಮತ್ತು ರಾಷ್ಟ್ರಾಭಿಮಾನ ಹೊಂದಿ ಬೆಳೆಯಬೇಕೆಂದು ಯುವಕರಿಗೆ ಕರೆ ನೀಡಿದರು.
ತಿಪಟೂರು ಷಡಕ್ಷರ ಮಠದ ರುದ್ರಮುನಿ ಸ್ವಾಮಿಗಳು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶ್ರೀಗಳು ಉಪದೇಶಾಮೃತವನ್ನಿತ್ತರು. ಸಾವಿರ ಉಪನ್ಯಾಸದ ಸರದಾರ ಜಿ.ಎಸ್. ಫಣಿಭೂಷಣ ಅವರು ಉಲ್ಲಸಿತ ಜೀವನಕ್ಕಾಗಿ ಹಾಸ್ಯ ವಿಚಾರವಾಗಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಹಲವಾರು ಗಣ್ಯಮಾನ್ಯರಿಗೆ ಮತ್ತು ಸೇವಾ ಸದ್ಭಕ್ತರಿಗೆ ಜಗದ್ಗುರುಗಳು ಶಾಲು ಹೊದಿಸಿ ಫಲತಾಂಬೂಲವನ್ನಿತ್ತು ಆಶೀರ್ವದಿಸಿದರು. ವೇದಿಕೆಯಲ್ಲಿ ಜಿ.ಬಿ. ಜ್ಯೋತಿಗಣೇಶ್, ಹಿರಿಯ ವಕೀಲ ವಿಜಯಪ್ರಕಾಶ್ ಮಿರ್ಜಿ ಉಪಸ್ಥಿತರಿದ್ದರು. ಗಾನಭೂಷಣ ವೀರೇಶ ಕಿತ್ತೂರು ರವರಿಂದ ಭಕ್ತಿಗೀತೆ ಜರುಗಿತು. ಟಿ.ಬಿ. ಶೇಖರ್ ಸ್ವಾಗತಿಸಿದರು, ತುಮಕೂರು ಮಹಾನಗರಪಾಲಿಕೆ ಸದಸ್ಯ ಟಿ.ಎಸ್. ಕರುಣಾರಾಧ್ಯ ನಿರೂಪಿಸಿದರು.