ವಿದ್ಯಾರ್ಥಿಗಳು ಉದ್ಯೋಗ ಕೈಗೊಳ್ಳುವುದು ಅವಶ್ಯಕ
ಕ.ಪ್ರ.ವಾರ್ತೆ , ಮಧುಗಿರಿ , ಜ 8
ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕೆ ಅಂಟಿಕೊಂಡು ಕೂರದೇ ತಾವೇ ಸ್ವಯಂ ಉದ್ಯೋಗ ಕೈಗೊಳ್ಳುವುದು ಅವಶ್ಯಕ ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಬುಧವಾರ ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ತುಮಕೂರು ಸಹಯೋಗದೊಂದಿಗೆ ತಾಲೂಕು ಮಟ್ಟದ ಉದ್ಯಮ ಶೀಲತಾ ಜಾಗೃತಿ ಶಿಬಿರ ಹಾಗೂ ಕೈಗಾರಿಕಾ ವಿಚಾರ ಸಂಕಿರಣ ಮತ್ತು 2009-14ರ ಕೈಗಾರಿಕಾ ನೀತಿಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸ ಕಾಲದಲ್ಲಿ ಸಮಯ ಹಾಳು ಮಾಡದೇ ಗುರಿ ಇಟ್ಟು ಕೊಂಡು ವಿದ್ಯೆ ಕಲಿಯಬೇಕು. ಶಿಕ್ಷಣ ಕಲಿತು ಸರ್ಟಿಫಿಕೆಟ್ ಪಡೆದು ಹೊರ ಬಂದಾಗ ನಿರುದ್ಯೋಗ ಸಮಸ್ಯೆ ತೊಡೆದು ಹಾಕಲು ಅವಕಾಶ, ಪ್ರಮಾಣಿಕ ಪ್ರಯತ್ನ ಗುರಿ, ಹಾಗೂ ಶ್ರದ್ಧೆಯಿಂದ ಮಾಡುವ ಮನಸ್ಸಿದ್ದಾಗ ಸ್ವಯಂ ಉದ್ಯೋಗ ಕೈಗೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದ ರಾಜಣ್ಣ, ಸ್ವಂತ ಉದ್ಯಮ ಪ್ರಾರಂಭಕ್ಕೆ ಸರ್ಕಾರ, ಸಂಘ, ಸಂಸ್ಥೆಗಳಿಂದ ಸಾಕಷ್ಟು ಸಾಲ ಸೌಲಭ್ಯ ದೊರಕುತ್ತಿದ್ದು ಅದನ್ನು ಸದ್ಬಳಕೆ ಮಾಡಿಕೊಂಡು ಉದ್ಯಮ ಶೀಲರಾಗುವ ಜತೆಗೆ ಉದ್ಯೋಗ ಸೃಷ್ಟಿಸಿ ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ಸಮಸ್ಯೆ ನೀಗಿಸಲು ಮುಂದಾಗಬೇಕು ಎಂದರು.
ತರಬೇತಿ ಪಡೆಯಲಿ: ಜಿ.ಪಂ.ಸದಸ್ಯ ಎಚ್. ಕೆಂಚಮಾರಯ್ಯ ಕೃಷಿಯಿಂದ ರೈತರು ಸ್ವಾವಲಂಬಿ ಆಗಲು ಸಾಧ್ಯವಿಲ್ಲ, ಕಾರಣ, ಸಕಾಲಕ್ಕೆ ಮಳೆ ಬಾರದೇ ರೈತರು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. 50 ಸಾವಿರ ರು.ಖಚು ಮಾಡಿ ಬೆಳೆ ಇಟ್ಟರೆ ಕೇವಲ 25 ಸಾವಿರ ರು.ಹುಟ್ಟತ್ತದೆ.ಈ ನಷ್ಟ ಸರಿ ದೂಗಿಸಲು ವ್ಯವಸಾಯದ ಜೊತೆಗೆ ಉಪಕಸುಬುಗಳು ಮತ್ತು ಕೈಗಾರಿಕೆಗಳು ಅತಿ ಮುಖ್ಯ ಎಂದ ಅವರು ವಿದ್ಯಾರ್ಥಿಗಳು ಉದ್ಯಮ ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕು ಎಂದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಎಸ್.ಉದಯಶಂಕರ್, ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕ ಮುಕುಂದಕೃಷ್ಣೇಗೌಡ, ಕೆಎಸ್‌ಎಸ್‌ಐಡಿಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಜಿ.ಪಂ.ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್ ಮಾತನಾಡಿದರು.
ಜಿ.ಪಂ.ಸದಸ್ಯೆ ಸುಮನ, ತಾ.ಪಂ.ಅಧ್ಯಕ್ಷೆ ಸುನಂದ ಸಿದ್ದಪ್ಪ, ಉಪಾಧ್ಯಕ್ಷೆ ಸಿದ್ದಾಗಂಗಾಂಬಿಕೆ, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಸಂಜೀವಗೌಡ ಡಿ.ಸುರೇಶ್ ಎಲ್ಲ ಐಟಿಐ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೀರೇಂದ್ರ ಪ್ರಾರ್ಥಿಸಿ ಕೈಗಾರಿಕಾ ವಿಸ್ತರಣಾಧಿಕಾರಿ ಡಿ.ಸುರೇಶ್ ಸ್ವಾಗತಿಸಿ ವಂದಿಸಿದರು.ಇದೇ ಸಂರ್ದಭದಲ್ಲಿ ಕೈಗಾರಿಕೆ ಇಲಾಖೆಯಿಂದ 32 ವಿವಿಧ ಫಲಾನುಭವಿಗಳಿಗೆ ಸಹಾಯಧನದ ಚಕೆ ವಿತರಿಸಿದರು.