ಸತ್ಯಕ್ಕೆ ಜನರನ್ನು ಪರಿವರ್ತಿಸುವ ಶಕ್ತಿಯಿದೆ
ಕ.ಪ್ರ. ವಾರ್ತೆ , ತುಮಕೂರು , ಜ. 8
ಸತ್ಯ ಮತ್ತು ದಯೆಯಿಂದ ಕೂಡಿದ ಮಾತಿಗೆ ಜನರನ್ನು ಪರಿವರ್ತಿಸುವ ಶಕ್ತಿಯಿದೆ. ತನಗಾಗಿ ತಾನು ಬಾಳದಿರುವುದೇ ನಿಜವಾದ ಬಾಳು. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀಮತಿ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಆಯೋಜಿಸಿದ್ದ 58 ನೇ ವರ್ಷದ ಜನ್ಮ ದಿನೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಧನೆಯ ಹಾದಿಯಲ್ಲಿ ತೊಂದರೆ ತಾಪತ್ರಯಗಳು ಬಂದರೂ ಗಟ್ಟಿತನದಿಂದ ಹೋರಾಡಬೇಕಾಗುತ್ತದೆ. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ಸಮತೋಲನವನ್ನು ಕಾಪಾಡಿಕೊಂಡು ಬಂದಾಗ ಜೀವನ ಸಾರ್ಥಕಗೊಳ್ಳುವುದು. ಹೂಗಳನ್ನು ಹಂಚುವ ಕೈಗಳಿಗೆ ಪರಿಮಳ ಸಹಜ ಹತ್ತುವಂತೆ ನಾವು ಮಾಡುವ ಒಳ್ಳೆಯ ಕೆಲಸಗಳಿಂದ ನಮಗೆ ಒಳಿತು ಆಗುವುದರಲ್ಲಿ ಅನುಮಾನವೇ ಇಲ್ಲ. ಕಾಲ ಕಾಲಕ್ಕೆ ಎಲೆಗಳು ಉದುರಿದರೂ ಬೇರುಗಳು ಭದ್ರವಾಗಿರುತ್ತವೆ. ಅಂತೆಯೇ ನಮ್ಮ ಅಭಿಪ್ರಾಯಗಳು ಬದಲಾದರೂ ತತ್ವ ಸಿದ್ಧಾಂತಗಳು ಬದಲಾಗುವುದಿಲ್ಲ. ಸತ್ಯ ಸಂಸ್ಕೃತಿ ಇತಿಹಾಸವನ್ನು ಅರಿಯುವ ಅವಶ್ಯಕತೆಯಿದೆ ಎಂದರು.
ಆದರ್ಶ ಮೌಲ್ಯ ಅಗತ್ಯ: ಹಣ ಗಳಿಕೆಯೊಂದೇ ಜೀವನದ ಗುರಿಯಲ್ಲ. ಗುಣ ಸಂಪಾದನೆ-ಸಂಸ್ಕಾರ ಅಗತ್ಯ. ವೀರಶೈವ ಧರ್ಮದಲ್ಲಿ ಆದರ್ಶ ಮೌಲ್ಯಗಳನ್ನು ಕಾಣಬಹುದಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ದೂರದೃಷ್ಟಿ ಮತ್ತು ಸಾಮಾಜಿಕ ಸತ್ಕ್ರಾಂತಿಗಳು ಜೀವನದ ಶ್ರೇಯಸ್ಸಿಗೆ ಕಾರಣವಾಗಿವೆ.
ತಮ್ಮ ಕಾಯದಲ್ಲಿ ಶಕ್ತಿ ಇರುವ ತನಕ ಧರ್ಮಮುಖಿಯಾಗಿ ಸಮಾಜಮುಖಿಯಾಗಿ ಕಾರ್ಯ ಮಾಡಬೇಕೆಂಬ ಸಂಕಲ್ಪ ತಮ್ಮದಾಗಿದೆ. ಭವಿಷ್ಯತ್ತಿನ ದಿನಗಳಲ್ಲಿ ರಚನಾತ್ಮಕ ಕಾರ್ಯಗಳಿಗೆ ಹೆಚ್ಚು ಮಹತ್ವ ಕೊಡಲಾಗುವುದೆಂದು ಶ್ರೀ ರಂಭಾಪುರೀ ಜಗದ್ಗುರುಗಳು ಈ ಸಂದರ್ಭದಲ್ಲಿ ನುಡಿದರು.
ಸಮಾರಂಭದ ನೇತೃತ್ವವನ್ನು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ವಹಿಸಿದ್ದರು. ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ರಂಭಾಪುರೀ ಜಗದ್ಗುರುಗಳ ಕ್ರಿಯಾಕತೃತ್ವ ಶಕ್ತಿಯನ್ನು ಕೊಂಡಾಡಿದರು. ಮಾಜಿ ಶಾಸಕ ಸಿ. ವೀರಭದ್ರಯ್ಯ, ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಕೊಪ್ಪಲ್ ನಾಗರಾಜ, ಟಿ.ಎಸ್. ಕರಣಾರಾಧ್ಯ, ಶಾಂತ ಬಿ.ಪಿ. ಗಂಗಾಧರ, ಟಿ.ಎಸ್. ಗಟ್ಟಿ ಅವರಿಗೆ ಗುರು ರಕ್ಷೆ ನೀಡಿ ಅಶೀರ್ವದಿಸಿದರು.
58 ಜ್ಯೋತಿ: 58 ನೇ ಜನ್ಮ ದಿನೋತ್ಸವದ ಅಂಗವಾಗಿ 58 ಜ್ಯೋತಿಗಳನ್ನು ಬೆಳಗಿಸಲಾಯಿತು. ಇದೇ ಸಂದರ್ಭದಲ್ಲಿ ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ಸಂಸದ ಜಿ.ಎಸ್. ಬಸವರಾಜು ಬಿಡುಗಡೆ ಮಾಡಿದರು. ಹಲವಾರು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಜಿ.ಹೆಚ್. ಪರಮಶಿವಯ್ಯ ಸ್ವಾಗತಿಸಿದರು. ಜಿ.ಎಸ್. ಸಿದ್ಧರಾಜು ನಿರೂಪಿಸಿದರು.
ಬುದ್ಧಿ ಮಾಂದ್ಯ ಮಕ್ಕಳ ಶಾಲೆಗೆ ಭೇಟಿ: ರಂಭಾಪುರಿ ಶ್ರೀಗಳು ತಮ್ಮ ಜನ್ಮ ದಿನೋತ್ಸವದ ಸಂದರ್ಭದಲ್ಲಿ ತುಮಕೂರಿನ ಎಂ.ಜಿ. ರಸ್ತೆಯಲ್ಲಿರುವ ಮಾನಸ ಬುದ್ಧಿ ಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು. ನಂತರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿದರು.