ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆರೆ- ಕಟ್ಟೆಗಳಿಗೆ ನೀರು ತುಂಬಿಸುವಂತೆ ಆಗ್ರಹ

Vishwanath S
Updated On : 10 Jan 2014, 12:56 pm

ಕೆ.ಆರ್. ಪೇಟೆ: ಕೆರೆ ಕಟ್ಟೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರು ಪಟ್ಟಣದಲ್ಲಿ ಗುರುವಾರ ಹೇಮಾವತಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೊಮ್ಮೇನಹಳ್ಳಿ, ದೊಡ್ಡಗಾಡಿಗನಹಳ್ಳಿ, ಮುದುಗೆರೆ, ಗಂಜಿಗೆರೆ, ಕತ್ತರಘಟ್ಟ, ಮಾಕವಳ್ಳಿ, ಕುಪ್ಪಹಳ್ಳಿ ಮತ್ತಿತರರ ಗ್ರಾಮಗಳ ರೈತರು ಕಚೇರಿಗೆ ಮುತ್ತಿಗೆ ಹಾಕಿ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಪಟ್ಟು ಹಿಡಿದು ಧರಣಿ ಕುಳಿತರು.
ನೀರು ಪೋಲು: ಈ ಬಾರಿ ಹೇಮಾವತಿ ಜಲಾಶಯವು ಭರ್ತಿಯಾಗಿ ಹೆಚ್ಚುವರಿ ನೀರನ್ನು ಕೆಆರ್‌ಎಸ್ ಮತ್ತು ತಮಿಳುನಾಡು ಮೂಲಕ ಸಮುದ್ರಕ್ಕೆ ವ್ಯರ್ಥವಾಗಿ ಹರಿಸಲಾಯಿತು. ಆದರೆ ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.
ಗ್ರಾಮೀಣ ಭಾಗದ ಕೆರೆ-ಕಟ್ಟೆಗಳು ಒಣಗಿ ಹೋಗಿದ್ದು, ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಕೃಷಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿಗೆ ಅಭಾವ ಉಂಟಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ರೈತಸಂಘದ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ ಮಾತನಾಡಿ, ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ತಾಲೂಕಿನ ಎಲ್ಲಾ ಕೆರೆ-ಕಟ್ಟೆಗಳನ್ನು ತುಂಬಿಸಬಹುದಾಗಿತ್ತು. ನೀರಾವರಿ ಎಂಜಿನಿರುಗಳ ನಿರ್ಲಕ್ಷ್ಯದಿಂದ ಜನರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಆರೋಪಿಸಿದರು.
ನೀರು ತುಂಬಿಸುವ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಸಿ. ನಾರಾಯಣಗೌಡ, ಚನ್ನರಾಯಪಟ್ಟಣ ಸಹಾಯಕ ಮುಖ್ಯ ಎಂಜಿನಿಯರ್ ಪದ್ಮನಾಭ್ ಅವರು ಒಂದೆರಡು ದಿನಗಳಲ್ಲಿ ತಾಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ವಾಪಸ್ ಪಡೆದರು.
ಪ್ರತಿಭಟನೆಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಕಾರ್ಯದರ್ಶಿ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಮರುವನಹಳ್ಳಿ ಶಂಕರ್, ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ಕುಮಾರ್, ಸಿಂಧಘಟ್ಟ ರವಿ, ಮುದುಗೆರೆ ಯೋಗಣ್ಣ, ಅನಂತಕುಮಾರ್, ನಂದೀಶ್, ಡಿ.ಆರ್. ನಾಗೇಶ್, ಡಿ.ಟಿ.ಮಂಜುನಾಥ್, ಚಂದ್ರು, ಅಭಿಷೇಕ್, ವಸಂತಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement