ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ...
ತುಮಕೂರು: ನಗರದ ಶಿರಾಗೇಟ್ನ ಹಿಂದೂಸ್ತಾನ್ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರು ತರಕಾರಿ ಕೊಳ್ಳುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸಂತೆಯ ಕಳೆ ಹೆಚ್ಚಿಸಿದರು. ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ ವ್ಯಾಪಾರ ಮತ್ತು ಕೃಷಿ ಜ್ಞಾನ ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಶಾಲೆಯ ಮಕ್ಕಳು ಶಿರಾಗೇಟ್ನ ಸತ್ಯಮಂಗಲ ರಸ್ತೆಯಲ್ಲಿರುವ ಶಾಲಾ ಆವರಣದಲ್ಲಿ ತೆರೆದ ಅಂಗಡಿಗಳಲ್ಲಿ ತರಕಾರಿ ಮತ್ತು ದಿನ ಬಳಕೆ ವಸ್ತುಗಳ ಭರ್ಜರಿ ಮಾರಾಟ ಮಾಡಿದರು. ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ನಡೆಯುವಂತೆಯೇ ಮಕ್ಕಳೂ ಕೂಡ ಹುಮ್ಮಸ್ಸಿನಿಂದಲೇ ಕೂಗುತ್ತ ವ್ಯಾಪಾರ ಮಾಡಿದರು. ಭಾಗವಹಿಸಿದ್ದ ಪೋಷಕರು, ಸಾರ್ವಜನಿಕರು ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಪಾಲಿಕೆ ಸದಸ್ಯ ವೆಂಕಟಪ್ಪ, ಮಾಜಿ ಸದಸ್ಯ ಲಕ್ಷ್ಮೀನರಸಿಂಹರಾಜು, ಬಿಜೆಪಿ ನಗರ ಘಟಕ ಉಪಾಧ್ಯಕ್ಷ ಪ್ರಸನ್ನಕುಮಾರ್, ಮಂಜುನಾಥ್, ಸಂಸ್ಥೆ ಕಾರ್ಯದರ್ಶಿ ಯಾಸ್ಮಿನ್ ಸುಲ್ತಾನ ಮತ್ತಿತರರು ಉಪಸ್ಥಿತರಿದ್ದರು.