'ವಿಜ್ಞಾನಕ್ಕೆ ಗಣಿತಶಾಸ್ತ್ರವೇ ಅಡಿಪಾಯ'
ತುಮಕೂರು: ಗಣಿತಶಾಸ್ತ್ರ ಒಂದು ವಿಷಯವಾಗಿ ಉಳಿಯದೆ ವಿಜ್ಞಾನದ ತಳಹದಿಯ ಮೂಲಾಧಾರ ಭಾಷೆಯಾಗಿದೆ ಎಂದು ಗುರುಶ್ರೀ ಇನ್ಸ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರೊ. ಎಚ್.ಜಿ. ಬಸವರಾಜು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಗಣಿತದ ವಿಶೇಷ ಕಾರ್ಯಾಗಾರ ಅಪ್ಲೈಡ್ ಮ್ಯಾಥ್ಮೆಟಿಕ್ಸ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತವನ್ನು ಜ್ಞಾನಾರ್ಜನೆಗಾಗಿ ಅಭ್ಯಾಸ ಮಾಡಿ. ಜ್ಞಾನವು ನಿಮಗೆ ದಾರಿದೀಪವಾಗಲಿದೆ ಎಂದು ಆಶಿಸುತ್ತಾ ಗಣಿತಶಾಸ್ತ್ರವು ನಿತ್ಯ ಜೀವನದಲ್ಲಿ ಹೇಗೆ ತನ್ನ ಪಾತ್ರ ನಿರ್ವಹಿಸುತ್ತದೆ ಹಾಗೂ ಬದಲಾಗುತ್ತಿರುವ ಸನ್ನಿವೇಶಗಳಿಗನುಗುಣವಾಗಿ ನಮ್ಮ ಜೀವನದಲ್ಲಿ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು
ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಎಸ್. ರೇಣುಕಪ್ಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೂಲವಿಜ್ಞಾನವು ಗಣಿತಶಾಸ್ತ್ರದಿಂದ ಪ್ರೇರೇಪಿತವಾಗಿ ಹಲವಾರು ಅನ್ವೇಷಣೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ದೈನಂದಿನ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಕರೆ ನೀಡಿದರು.
ಎಸ್. ಗುರುಪ್ರಸಾದ್ ನಿರೂಪಿಸಿದರು. ಸುಮನ ಎಸ್. ಮತ್ತು ಸಂಗಡಿಗರು ಪ್ರಾರ್ಥಿಸಿ, ಆರ್.ಸಿ. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಪಿ. ಕುಮಾರಸ್ವಾಮಿ ವಂದಿಸಿದರು.