ವಿದ್ಯುತ್ ಅವಘಡ; ಯುವಕ ಸಾವು
ಮಧುಗಿರಿ: ಕೂಲಿ ಕೆಲಸಕ್ಕೆ ಹೋಗಿದ್ದ ಜಾಗದಲ್ಲಿ ಒಣಗಿದ ತೆಂಗಿನ ಮರ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ, ಅಲ್ಲೇ ಕೃಷಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೇಲೆ ವಿದ್ಯುತ್ ತಂತಿ ಹರಿದು ಮೃತಪಟ್ಟಿರುವ ದಾರುಣ ಘಟನೆ ಮಧುಗಿರಿ ತಾಲೂಕಿನ ಪುರವರ ಹೋಬಳಿ ನಿಟ್ರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಕೂಲಿಕಾರ್ಮಿಕ ರಮೇಶ(20) ಮೃತಪಟ್ಟ ರ್ದುದೈವಿ.
ಬುಧವಾರ ಬೆಳಗ್ಗೆ ನಿಟ್ರಹಳ್ಳಿ ಗ್ರಾಮದ ವೆಂಕಟಪ್ಪ ಅವರ ಸಾಗುವಳಿ ಜಮೀನಿನಲ್ಲಿ ಜೋಳದ ಬೆಳೆ ಕಟಾವು ಮಾಡಲು 5 ಜನ ಕೂಲಿ ಕಾರ್ಮಿಕರು ತೆರಳಿದ್ದರು .ಎಲ್ಲರೂ ಒಟ್ಟಾಗಿ ಕೆಲಸ ಮಾಡುವಾಗ ಅಲ್ಲೆ ಒಣಗಿ ನಿಂತಿದ್ದ ತೆಂಗಿನ ಮರ ಎಲೆಕ್ಟ್ರಿಕ್ ಕಂಬದ ಮೇಲೆ ಮುರಿದು ಬಿದ್ದ ಪರಿಣಾಮ, ಅದು ರಮೇಶನ ಮೇಲೆ ಬಿದ್ದಿದೆ. ಆತ ಒದ್ದಾಡುತ್ತಿದ್ದಾಗ ಇನ್ನು ಜೀವವಿದ್ದು, ಈತನ ಜತೆ ಕೆಲಸ ಮಾಡುತ್ತಿದ್ದ ಸಹ ಪಾಠಿಗಳಾದ ಕೃಷ್ಣಪ್ಪ, ಈರದಾಸಪ್ಪ, ಚಂದ್ರಶೇಖರ್, ಮಾಲೂರಪ್ಪ ಆಸ್ಪತ್ರೆಗೆ ಆಟೋ ಒಂದರಲ್ಲಿ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಏನ್ನಲಾಗಿದೆ.
ನಾಲ್ವರ ವಿರುದ್ಧ ಆರೋಪ: ಆದರೆ ಮೃತನ ತಂದೆ ರಾಮಣ್ಣ ನನ್ನ ಮಗ ರಮೇಶನ ಸಾವಿನ ವಿಚಾರವನ್ನು ಕೃಷ್ಣಪ್ಪ, ಈರದಾಸಪ್ಪ, ಚಂದ್ರಶೇಖರ್, ಮಾಲೂರಪ್ಪ ನಮಗೆ ವಿಷಯ ತಿಳಿಸದೇ ಆಸ್ಪತ್ರೆಗೆ ದಾಖಲು ಮಾಡಿ ಪರಾರಿಯಾಗಿದ್ದಾರೆ. ಹಾಗಾಗಿ ಈ ಸಾವು ಅನುಮಾಸ್ಪದದಿಂದ ಕೂಡಿದ್ದು ಈ ನಾಲ್ಕು ಜನರನ್ನು ವಿಚಾರಣಗೆ ಒಳಪಡಿಸಿ ನನ್ನ ಮಗ ಹೇಗೆ ಸತ್ತ ಎಂಬ ವಿಚಾರವನ್ನು ಬಹಿರಂಗಗೊಳಿಸುವಂತೆ ಆರೋಪಿಸಿ ಮಧುಗಿರಿ ಸಿಪಿಐ ಶಿವಮೊರ್ತಿ ಅವರಿಗೆ ರಾಮಣ್ಣ ಗುರುವಾರ ದೂರು ನೀಡಿದ್ದಾರೆ. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.